ಬಳ್ಳಾರಿ : ವಿದ್ಯಾರ್ಥಿಗಳು ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿಕೊಂಡು ಮಾದರಿಯಾಗಬೇಕು ಎಂದು ಎಸ್‌ಎಸ್‌ಎ ಕಾಲೇಜು ಪ್ರಾಧ್ಯಾಪಕ ಡಾ.ಸೋಮನಾಥ ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಆಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಶಿಸ್ತು, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸದಿಂದ ಬದುಕನ್ನು ರೂಪಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಎಂದೂ ಮರೆಯಬಾರದು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ನವ ಮಾಧ್ಯಮಗಳು ನಮ್ಮ ಆಲೋಚನಾ ಕ್ರಮ ಮತ್ತು ಬದುಕನ್ನು ತೀವ್ರವಾಗಿ ಪಲ್ಲಟಗೊಳಿಸುತ್ತಿವೆ. ಎಚ್ಚರಿಕೆಯ ನಡೆಯಿಂದ ಕೌಟುಂಬಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಅರಿತು ಸಾಗಬೇಕು ಎಂದರು.
ಉಪನ್ಯಾಸಕರಾದ ಕೆ.ಬಸಪ್ಪ, ಸಿ.ಮಂಜುನಾಥ, ರಾಜಶೇಖರ, ಹರೀಶ, ಮಹಾಂತೇಶ, ಓಬಣ್ಣ , ರಾಮಣ್ಣ, ವಿಷ್ಣು ಹಡಪದ, ನೇತಿ ರಘುರಾಮ್ ಇದ್ದರು.