ಮೈಸೂರು: ನಿಮ್ಮಲ್ಲಿನ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿಕೊಳ್ಳುವ ಜತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಿಮ್ಮ ಕೆಲಸ ಕಾರ್ಯಗಳ ಮೌಲ್ಯಮಾಪನ ಮಾಡಿಕೊಂಡರೆ ಮಂದಿನ ಹಾದಿ ಸುಗಮವಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಭಾಗದಿಂದ ನಗರದ ಸರಸ್ವತಿಪುರಂ ಎನ್‌ಎಸ್‌ಎಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆಯ್ಕೆ ಇರುತ್ತದೆ. ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಿ. ಕೇವಲ ಅಂಕಪಟ್ಟಿಯಿಂದ ಯಾವುದೇ ಪ್ರಯೋಜನ ಇಲ್ಲ. ನಿಮ್ಮಲ್ಲಿನ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಿಮ್ಮ ಕೆಲಸ ಕಾರ್ಯಗಳ ಮೌಲ್ಯಮಾಪನ ಮಾಡಿಕೊಳ್ಳಿ ಎಂದರು.
ಜೀವನ ರೂಪಿಸುವಲ್ಲಿ ಉನ್ನತ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಓದಿನ ದಿನಗಳಲ್ಲಿ ಕೇವಲ ಪಠ್ಯಕ್ಕೆ ಸೀಮಿತ ಆಗದೇ ಬೇರೆ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಮೈಸೂರು ವಿ.ವಿ. ಸಿಂಡಿಕೇಟ್ ಸದಸ್ಯೆ ಪ್ರೊ.ಬಿ.ಆರ್. ವಿಜಯಕುಮಾರಿ ಮಾತನಾಡಿ, ಮೈಸೂರು ವಿ.ವಿ.ಗೆ ತನ್ನದೇ ಆದ ಘನತೆ ಇದೆ. ಎನ್‌ಎಸ್‌ಎಸ್ ಚಟುವಟಿಕೆಗಳಿಗೆ ಭದ್ರ ಅಡಿಪಾಯ ಹಾಕಿದ್ದು ಇಲ್ಲಿಯೇ. ಶಿಸ್ತು, ಸಂಯಮ, ಕಾಯಕ ಹಾಗೂ ಸೇವಾ ಮನೋಭಾವ ಬೆಳೆಸುವ ಯೋಜನೆ ಇದಾಗಿದ್ದು, ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಆಶಿಸಿದರು.
ವಿ.ವಿ. ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತ ಆಗಿರದೇ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ವ್ಯಕ್ತಿತ್ವ ವಿಕಸನ ಆಗಬೇಕು ಎನ್ನುವುದು ಈ ಕಾರ್ಯಕ್ರಮಗಳ ಆಶಯ ಎಂದರು.
ಮೈಸೂರು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಎಂ.ಬಿ. ಸುರೇಶ, ಪ್ರೊ. ಬಿ. ಚಂದ್ರಶೇಖರ, ನಿಂಗರಾಜು, ಪಿ.ಎಸ್. ಮಧುಸೂಧನ್ ಇದ್ದರು.