ಜಿಲ್ಲೆ

ಜ್ಞಾನ ಸಂಪಾದನೆಗೆ ಮಿತಿ ಬೇಡ

ಮೈಸೂರು; ಅಧ್ಯಯನಕ್ಕೆ, ತಿಳಿವಳಿಕೆಗೆ ಯಾವುದೇ ಮಿತಿ ಅಥವಾ ವ್ಯಾಪ್ತಿ ಇಲ್ಲ ಎಂದು ಮೈಸೂರು ನಗರದ ಉಪ ಪೊಲೀಸ್ ಆಯುಕ್ತ ಎಂ.ಮುತ್ತುರಾಜ್ ಅಭಿಪ್ರಾಯಪಟ್ಟರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತ ಗಂಗೋತ್ರಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 50 ದಿನಗಳ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬ್ಯಾಂಕಿಂಗ್ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.


ಪ್ರತಿಯೊಬ್ಬ ಸ್ಪರ್ಧಾತ್ಮಕ ಶಿಬಿರಾರ್ಥಿಗೂ ಏಕಾಗ್ರತೆ ಬಹುಮುಖ್ಯ. ಅದಕ್ಕಾಗಿ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕೆಲವೊಮ್ಮೆ ವಿಫಲರಾದರೂ ಮುಂದೊಂದು ದಿನ ಸಫಲರಾಗಬಹುದು. ಆದರೆ, ನಿರಂತರ ಓದಿನಲ್ಲಿ ತಲ್ಲೀನರಾಗಬೇಕು. ಜ್ಞ್ಞಾನ ಸಂಪಾದನೆಗೆ ಮಿತಿ ಹಾಕಿಕೊಳ್ಳಬಾರದು. ಅದು ನಮಗೆ ವಿವಿಧ ಆಯಾಮಗಳಲ್ಲಿ ಪ್ರಯೋಜನಕಾರಿ ಆಗುತ್ತದೆ ಎಂದರು.


ಗ್ರಾಮೀಣ ಭಾಗದ ಅನೇಕರಿಗೆ ಅವಕಾಶಗಳಿರುವುದಿಲ್ಲ. ಆದರೆ ಕರಾಮುವಿ ಉತ್ತಮ ಅವಕಾಶ ಕಲ್ಪಿಸಿದೆ. ಅದನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದ ಅವರು, ನಾನು ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡಿದ್ದು, ಕರಾಮುವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವೆ ಎಂದು ಸ್ಮರಿಸಿದರು.


ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಆರ್.ಸತೀಶ್ ಮಾತನಾಡಿ, ಎಲ್ಲರಿಗೂ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಆಸೆಯಿರುತ್ತದೆ. ಅದಕ್ಕಾಗಿ ಹೇಗೆ ಶ್ರಮ ಹಾಕುತ್ತೇವೆ ಎಂಬುದು ಮುಖ್ಯವಾಗುತ್ತದೆ. ಮೊದಲಿಗೆ ಉದ್ಯೋಗಾವಕಾಶಗಳು ಎಲ್ಲೆಲ್ಲಿ ಲಭ್ಯವಿದೆ ಎಂಬುದನ್ನು ಕಂಡುಕೊಳ್ಳಬೇಕು. ನಂತರ ಅದಕ್ಕಾಗಿ ತಯಾರಾಗಿ, ಸ್ಪರ್ಧಾತ್ಮಕ ಮನೋಭಾವವನ್ನು ನಿರಂತರವಾಗಿ ಕಾಯ್ದುಕೊಂಡು ಸಫಲರಾಗಬೇಕು ಎಂದು ಸಲಹೆ ನೀಡಿದರು.


ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ವಿದ್ಯಾರ್ಥಿಯು ಶ್ರದ್ಧ್ಧೆಯಿಂದ ಅಧ್ಯಯನ ಮಾಡುವುದು ಹಾಗೂ ಅಧ್ಯಾಪಕರು ಪಾಠ-ಪ್ರವಚನವನ್ನು ಅಚ್ಚುಕಟ್ಟಾಗಿ ಮಾಡಿದರೆ ಮಾತ್ರ ಕಾಯಕವೇ ಕೈಲಾಸ ಮಾತಿಗೆ ನೈಜ ಅರ್ಥ ಸಿಗಲಿದೆ. ನಾವೆಲ್ಲರೂ ಯಾವುದೇ ಹಂತದಲ್ಲಿದ್ದರೂ ವಿಚಾರ ಸಂಗ್ರಹಕ್ಕೆ ಒತ್ತು ನೀಡಬೇಕು. ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು ಎಂದರು.


ಕುಲಸಚಿವ ಪ್ರೊ.ಕೆಎಲ್‌ಎನ್ ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಅಧ್ಯಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಗಣೇಶ್ ಕೊಪ್ಪಲ್, ಸಿದ್ದೇಶ್ ಹೊನ್ನೂರ್ ಉಪಸ್ಥಿತರಿದ್ದರು.