ಶಹಾಪುರ: ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಮತ್ತು ಕೌಶಲಗಳಿಗೆ ತುಂಬಾ ಪ್ರಾಮುಖ್ಯತೆ ಇದ್ದು, ವಿದ್ಯಾರ್ಥಿಗಳು ಅದನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ಪ್ರೊ.ಕಾಳಮ್ಮ ಎಸ್.ಎಚ್. ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಕಸಾಪದಿಂದ ಶನಿವಾರ ಆಯೋಜಿಸಿದ ಶಿಕ್ಷಣದೊಂದಿಗೆ ನಮ್ಮ ಅನುಸಂಧಾನ-ಒAದು ಸಾಂಸ್ಕೃತಿಕ ಮುಖಾಮುಖಿ ಕಾರ್ಯಕ್ರಮ ಹಾಗೂ ೨೦೨೪-೨೫ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ವಿದ್ಯಾ ಸ್ಫೂರ್ತಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು, ಶಿಕ್ಷಣದ ಜತೆಗೆ ಕೌಶಲ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಓದುವುದನ್ನು ಪ್ರೀತಿಸಿದರೆ ಯಾವುದೇ ವಿಷಯ ಕಠಿಣ ಎನಿಸುವುದಿಲ್ಲ. ಪ್ರತಿಯೊಂದು ಭಾಷೆಗೆ ಅದರದೆಯಾದ ಮಹತ್ವವಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾಗಿ ಉನ್ನತಮಟ್ಟದ ಅಧಿಕಾರಿಗಳಾಗಿದ್ದಾರೆ. ಆತ್ಮವಿಶ್ವಾಸ, ಸತತ ಪ್ರಯತ್ನ, ಸಮಯ ನಿರ್ವಹಣೆ, ಬದ್ಧತೆ, ಕೌಶಲಗಳ ಸದ್ಭಳಕೆಯಿಂದ ಮಾತ್ರ ಉಜ್ವಲ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.
ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ್, ಶಹಾಪುರ ತಾಲೂಕಿನ ವಿದ್ಯಾರ್ಥಿಗಳ ಸಾಧನೆ ನನಗೆ ಖುಷಿ ತಂದು ಕೊಟ್ಟಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕನ್ನಡ ವಿದ್ಯಾ ಸ್ಫೂರ್ತಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವ ಕಸಾಪ ಕಾರ್ಯ ಶ್ಲಾಘನೀಯ ಎಂದರು. ತಾಲೂಕ ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸ್ಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಸಿದ್ಧರಾಮ ಹೊನ್ಕಲ್, ನಿಕಟಪೂರ್ವ ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ, ಸಾಹಿತಿ ಶಿವಣ್ಣ ಇಜೇರಿ ಹಾಗೂ ಡಾ. ದೇವಿಂದ್ರಪ್ಪ ಹಡಪದ, ಮಲ್ಲಣ್ಣಗೌಡ ಪೋಲಿಸ್ ಪಾಟೀಲ, ಮಲ್ಲಣ್ಣ ಹೊಸಮನಿ, ಮಹೇಶ ಪತ್ತಾರ, ಶರಣಬಸವ ಪೋಲಿಸ್ ಬಿರಾದಾರ, ಡಾ. ಸಾಯಬಣ್ಣ ಮುಡಬೂಳ, ಭಾಗ್ಯ ದೊರೆ, ನಿರ್ಮಲಾ ತುಂಬಗಿ, ಕೋಶಾಧ್ಯಕ್ಷ ಶಂಕರ ಹುಲಕಲ್ (ಕೆ), ಬಸವರಾಜ ಹಿರೇಮಾಠ, ಗೌರವ ಕಾರ್ಯದರ್ಶಿಗಳಾದ ಸುರೇಶ ಅರುಣಿ, ಡಾ. ರಾಘವೇಂದ್ರ ಹಾರಣಗೇರಾ, ಸಾಯಬಣ್ಣ ಪುರ್ಲೆ, ರಂಗನಾಥ ದೊರೆ, ಡಾ. ಸತೀಶ ತುಳೇರ, ದೇವಿಂದ್ರಪ್ಪ ವಿಶ್ವಕರ್ಮ, ಗುರುರಾಜ ಬಳ್ಳೂರಗಿ ಮುಂತಾದವರು ಉಪಸ್ಥಿತರಿದ್ದರು.