ಜಿಲ್ಲೆ

ಜ್ಞಾನ ವೃದ್ಧಿಗೆ ಬೇಸಿಗೆ ಶಿಬಿರ ಸಹಕಾರಿ

ಕುಶಾಲನಗರ: ಮಕ್ಕಳ ವ್ಯಕ್ತಿತ್ವ ಹಾಗೂ ಬೌದ್ಧಿಕ ಜ್ಞಾನ ವಿಕಸನಗೊಳ್ಳಲು ಬೇಸಿಗೆ ಶಿಬಿರ ಸಹಕಾರಿ ಎಂದು ಕುಶಾಲನಗರದ ಟೀಮ್ ಆಟಿಟ್ಯೂಡ್ ಕಲ್ಚರಲ್ ಅಕಾಡೆಮಿ ಸಂಸ್ಥಾಪಕ ಸಚಿನ್ ಅಭಿಪ್ರಾಯಪಟ್ಟರು.


ಟೀಮ್ ಆಟಿಟ್ಯೂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಸೀಸನ್-7 ರ ಬೇಸಿಗೆ ಉಚಿತ ಶಿಬಿರದಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೇಸಿಗೆಯ ರಜಾ ದಿನಗಳಲ್ಲಿ ಮಕ್ಕಳು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಮಾಡಲು ಇಷ್ಟಪಡುತ್ತಾರೆ. ಪಾಲಕರು ಕೂಡ ಮಕ್ಕಳ ಆಸೆಯಂತೆ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದುಕೊಂಡು ಹೋಗಿ ಖುಷಿ ಪಡಿಸುತ್ತಾರೆ. ಇನ್ನೂ ಕೆಲ ಮಕ್ಕಳು ಬೇಸಿಗೆ ಶಿಬಿರದಲ್ಲಿ ಭಾಗಿಯಾಗುತ್ತಾರೆ. ಅಲ್ಲಿ ನೃತ್ಯ, ಚಿತ್ರಕಲೆ, ಸಾಹಿತ್ಯ, ನಟನೆ, ಮತ್ತಿತರ ಕಲಾ ಚಟುವಟಿಕೆಗಳನ್ನು ಕಲಿತು ರಜಾ ದಿನಗಳನ್ನು ಅಮೂಲ್ಯವಾಗಿಸಿಕೊಳ್ಳುತ್ತಾರೆ ಎಂದರು.


ಮಕ್ಕಳಿಗೆ ಶಾಲೆಗಳಲ್ಲಿ ಪಠ್ಯಪುಸ್ತಕದ ಚೌಕಟ್ಟಿನ ಒಳಗೆ ಪೂರಕವಾದ ಶಿಕ್ಷಣವನ್ನು ನೀಡಲಾಗುತ್ತದೆ. ಮಕ್ಕಳಲ್ಲಿ ಹೊರ ಪ್ರಪಂಚದ ಅರಿವು, ವ್ಯವಹಾರಿಕ ಜ್ಞಾನ, ಗ್ರಾಹಕರನ್ನು ಸೆಳೆಯುವ ರೀತಿ, ಲೆಕ್ಕಾಚಾರ, ನ್ಯಾಯ ಸಮ್ಮತ ವ್ಯವಹಾರ, ಜನ ಸಂಪರ್ಕ ಇವೆಲ್ಲವೂ ಅಗತ್ಯವಾಗಿ ಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.


ಪಾಲಕ ಸಂದೀಪ್ ಮಾತನಾಡಿ, ಮಕ್ಕಳಲ್ಲಿ ವ್ಯವಹಾರ ಜ್ಞಾನ ಅಭಿವೃದ್ಧಿಗೆ ಮಕ್ಕಳ ಸಂತೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದರು.

ಅಕಾಡೆಮಿಯ ಪ್ರಮುಖರಾದ ಕಿರಣ್, ಚಂದನ್, ಪ್ರವೀಣ್ ಕುಮಾರ್, ಪಾಲಕರಾದ ಸಂದೀಪ್, ಅನೀಶ್, ಇಂದಿರಾ, ದಿವ್ಯಾ, ಮಾನಸ, ಅಕ್ಷತಾ, ಸ್ಮಿತಾ, ದಿವ್ಯಾ, ರಾಜಲಕ್ಷ್ಮೀ, ವೇದಾವತಿ ಇತರರು ಪಾಲ್ಗೊಂಡಿದ್ದರು.