ಜಿಲ್ಲೆ

ಜೋಳ ಖರೀದಿಯಲ್ಲಿ ಅವ್ಯವಹಾರ ರೇವಣ್ಣ ಆರೋಪಕ್ಕೆ ಕೆ.ಎನ್. ರಾಜಣ್ಣ ತಿರುಗೇಟು

ಹಾಸನ: ಕೆಎಂಎಫ್‌ನಿಂದ ನೇರವಾಗಿ ಜೋಳ ಖರೀದಿ ಮಾಡುವ ಬಗ್ಗೆ ಮತ್ತು ಅವ್ಯವಹಾರ ಸಂಬಂಧ ಕೆಎಂಎಫ್ ಮಾಜಿ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿರುವ ರೇವಣ್ಣ ಸಾರ್ವಜನಿಕವಾಗಿ ಹೇಳುವ ಬದಲು ಸಭೆಯಲ್ಲಿ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ತಿರುಗೇಟು ನೀಡಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಬಗ್ಗೆ ನಮಗಿಂತ ಅವರಿಗೆ ಚೆನ್ನಾಗಿ ಗೊತ್ತು. ಅಲ್ಲಿ ನಡೆದಿರುವ ಹಗರಣಗಳ ಬಗ್ಗೆ ಸಭೆ ಕರೆಯುವಂತೆ ಹೇಳಿ ಚರ್ಚೆ ಮಾಡಿ ಸಮಸ್ಯೆ ಪರಿಹರಿಸಲು ಅವರಿಗೆ ಹೆಚ್ಚು ಅವಕಾಶಗಳಿವೆ. ಏಕೆಂದರೆ ಅವರು ನಿರ್ದೇಶಕರಾಗಿದ್ದಾರೆ. ಈಗಲೂ ಆಡಳಿತ ಮಂಡಳಿಯಲ್ಲಿ ಪ್ರಮುಖ ಸದಸ್ಯರಾಗಿದ್ದಾರೆ. ಅದನ್ನು ಬಿಟ್ಟು ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಾವೇರಿ ಸಲಹಾ ಸಮಿತಿ ಸಭೆ ಕರೆದಿಲ್ಲ ಎಂಬ ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರವರ ಅಭಿಪ್ರಾಯಗಳನ್ನು ಅವರು ವ್ಯಕ್ತಪಡಿಸಲಿ. ನಾನೇನು ಅಡ್ಡಿಪಡಿಸುವುದಿಲ್ಲ. ನವೆಂಬರ್ 19ರಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನಲ್ಲಿ ಸಭೆ ಕರೆಯುತ್ತೇನೆ. ಅಲ್ಲಿ ವಿಸ್ತೃತವಾಗಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಬಿಡುಗಡೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ನೇರವಾಗಿ ಫಲಾನುಭವಿ ಖಾತೆಗೆ ಹಣ ಹೋಗುತ್ತದೆ. ಇದರ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಜತೆಗೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದ್ದು ಬೇರೆ ಬೇರೆ ಕಾರಣಗಳಿಂದ. ಅವೆಲ್ಲವನ್ನು ಸರಿಪಡಿಸುವ ಕೆಲಸ ಸರ್ಕಾರದಿಂದ ನಡೆಯುತ್ತದೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿ, ನಾವು ಅವರನ್ನು ಸೋಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಯಾರೇ ಅಭ್ಯರ್ಥಿಯಾದರು ಕೂಡ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಏನೆಲ್ಲ ತಂತ್ರಗಾರಿಕೆ ಮಾಡಬೇಕು ಎಂಬುದನ್ನು ನಾವು ಮಾಡುತ್ತೇವೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚಿಗೆ ಜ್ಯೋತಿಷ್ಯ ಹೇಳುವುದನ್ನು ಕಲಿತುಕೊಂಡು ಬಂದಿದ್ದಾರೆ. ನಾನು ಜ್ಯೋತಿಷಿ ಅಲ್ಲ. ನನಗೆ ಹೇಳಲು ಬರುವುದಿಲ್ಲ. ಸರ್ಕಾರ ಪತನವಾಗುವುದು ಎಂಬ ಆರೋಪ ಸತ್ಯಕ್ಕೆ ದೂರವಾದದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವಂತೆ ಕೇಂದ್ರ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು ಎಂದರು.

ಅನಾರೋಗ್ಯದಿಂದ ಹಾಸನಕ್ಕೆ ಬಂದಿರಲಿಲ್ಲ

ಕಳೆದ ಎರಡು ತಿಂಗಳಿನಿಂದ ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಜಿಲ್ಲೆಗೆ ಬರಲು ಸಾಧ್ಯವಾಗಲಿಲ್ಲ. ಇದನ್ನು ಬಿಟ್ಟು ಉದ್ದೇಶಪೂರ್ವಕವಾಗಿ ನಾನು ಬಂದಿಲ್ಲ ಎಂದು ಯಾರೂ ಅನ್ಯತಾ ಭಾವಿಸಿಕೊಳ್ಳಬೇಡಿ. ನನ್ನ ಪರಿಸ್ಥಿತಿಯನ್ನು ಈಗ ನೀವೇ ನೋಡಿ. ಈ ಹಿಂದೆ ನನ್ನ ಆರೋಗ್ಯವನ್ನು ವಿಚಾರಿಸಲು ಸಚಿವರು, ಶಾಸಕರು ಆಗಮಿಸಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಚಾರ ಎಂದು ಸಚಿವ ಕೆಎನ್ ರಾಜಣ್ಣ ಸ್ಪಷ್ಟನೆ ನೀಡಿದರು.

ಬರದಿಂದ 36 ಸಾವಿರ ಕೋಟಿ. ರೂ. ನಷ್ಟ

ಬರದಿಂದ ರಾಜ್ಯದಲ್ಲಿ 36,000 ಕೋಟಿ ರೂ. ನಷ್ಟ ಆಗಿದೆ. ಅದನ್ನು ನಮ್ಮ ವರದಿ ಮತ್ತು ಮಾನದಂಡಗಳ ಪ್ರಕಾರ ರಾಜ್ಯ 4,800 ಕೋಟಿ ರೂ. ಪರಿಹಾರಕ್ಕೆ ಅರ್ಹರಾಗಿದೆ. ಈಗ ರಾಜ್ಯಕ್ಕೆ ಬಂದಿದ್ದ ಕೇಂದ್ರ ತಂಡದ ವರದಿಯನ್ನು ಆಧರಿಸಿ ನಮಗೆ ಎಷ್ಟು ಪರಿಹಾರ ಸಿಗಬಹುದು ಎಂಬುದನ್ನು ತಿಳಿಯಬಹುದಾಗಿದೆ. ಕೇಂದ್ರದಲ್ಲಿ ಬರ ಘೋಷಣೆಗೆ ಶೇಕಡ 63ರಷ್ಟು ಮಳೆ ಕೊರತೆ ಇರಬೇಕು. ಬರ ಘೋಷಣೆ ನಿಯಮ ಬದಲಾವಣೆಗೆ ಮುಖ್ಯಮಂತಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ ಅವರು ಇದುವರೆಗೂ ಆ ಬಗ್ಗೆ ಯಾವ ಪ್ರತಿಕ್ರಿಯೆ ನೀಡಿಲ್ಲ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಮಂಗಳವಾರ ಕೂಡ ಸಭೆ ನಡೆದಿದ್ದು ಉಳಿದ ಕಡೆ ಸಮೀಕ್ಷೆಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಅವುಗಳನ್ನು ಕೂಡ ಬರಪೀಡಿತ ಎಂದು ಘೋಷಣೆ ಮಾಡಲಾಗುವುದು. ಬರ ಸಾಧಾರಣ ಎನ್ನುವುದು ನಮ್ಮ ಮಾನದಂಡ ಅಲ್ಲ. ಅದು ಕೇಂದ್ರ ಸರ್ಕಾರದ ಗೈಡ್‌ಲೈನ್. ಅದನ್ನು ಮೀರಿ ನಾವು ಒಂದಕ್ಷರ ಕೂಡ ಬದಲಾವಣೆ ಮಾಡಲು ಆಗುವುದಿಲ್ಲ. ಹಾಗೆ ಏನಾದರೂ ಮಾಡಿದರೆ ಕೇಂದ್ರದಿಂದ ನಮಗೆ ಪರಿಹಾರವೂ ಕೂಡ ಸಿಗುವುದಿಲ್ಲ ಎಂದರು.

ಬರಗಾಲದ ವೀಕ್ಷಣೆಗೆ ಆಗಮಿಸಿದ್ದ ಕೇಂದ್ರ ತಂಡಕ್ಕೆ ನಾನು, ಕೃಷಿ ಸಚಿವರು ಹಾಗೂ ಕಂದಾಯ ಸಚಿವರು ವಿವರಣೆ ನೀಡಿದ್ದೇವೆ. ಸರ್ಕಾರದ ನಿಲುವನ್ನು, ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಟ್ಟಿದ್ದೇವೆ. ಅಲ್ಲದೆ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಬಳಿಕ ಅರಕಲಗೂಡು, ಆಲೂರು, ಅರಸೀಕೆರೆ, ಹಾಸನ ತಾಲೂಕುಗಳನ್ನು ಬರ ತಾಲೂಕು ಎಂದು ಘೋಷಣೆ ಮಾಡಲು ತೀರ್ಮಾನ ಆಗಿದೆ ಎಂದು ಹೇಳಿದರು.

ನಿರ್ದಾಕ್ಷಿಣ್ಯ ಕ್ರಮ

ರೇವಣ್ಣ ಆಪ್ತ ಅಶ್ವತ್ಥ್ ಗೌಡ ಮೇಲೆ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮದಿಂದ ತನಿಖೆ ಮಾಡುತ್ತಿದ್ದಾರೆ. ಯಾರು ಆರೋಪಿಗಳಿದ್ದಾರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನಿನ ಅನ್ವಯ ವಿಚಾರಣೆಗೆ ಒಳಪಡಿಸಲಾಗುವುದು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಚಿವರು ಭರವಸೆ ನೀಡಿದರು.