ಸಿರಗುಪ್ಪ: ತಾಲೂಕಿನ ಕರೂರು ಗ್ರಾಮದ ಜೋಳ ಖರೀದಿ ಕೇಂದ್ರದಲ್ಲಿ ಅವ್ಯವಹಾರಕ್ಕೆ ಹುನ್ನಾರ ನಡೆಸಲಾಗುತ್ತಿದೆ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಜೋಳ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಉತ್ತನೂರು ಗ್ರಾಮದ ಮಲ್ಲಮ್ಮ ಮತ್ತು ಅವರ ತಮ್ಮಗೆ ಸಂಬಂಧಿಸಿದ 600 ಚೀಲ ಜೋಳ ಖರೀದಿ ಮಾಡಿ ಮೊದಲ ಗ್ರೇಡ್ ಎಂದು ನಮೂದಿಸಿ ತಾಲೂಕಿನ ಎ.ಪಿ.ಎಂ.ಸಿ ಗೋದಾಮಿಗೆ ಕಳಿಸಲಾಗಿದೆ. ಆದರೆ, 9 ದಿನಗಳಾದರೂ ಅನ್‌ಲೋಡ್ ಮಾಡದಿರುವುದಕ್ಕೆ ಕಾರಣ ಕೇಳಿದರೆ ಹುಳು ಬಿದ್ದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಈ ಕುರಿತು ದೂರವಾಣಿಯಲ್ಲಿ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಯೊಂದಿಗೆ ಮಾತನಾಡಿ, ಒಂದು ಕಡೆ ಖರೀದಿ ಮಾಡಿ ಮತ್ತೊಂದು ಕಡೆ ಯಾಕೆ ಸಂಗ್ರಹಿಸುತ್ತೀರಿ ಎಂದು ಪ್ರಶ್ನಿಸಿದರು. ಅಧಿಕಾರಿಗಳು ತಿಳಿಸಿದಾಗ ರೈತರು ಬಂದು ತೂಕ ಹಾಕಿಸಿ, ಗುಣಮಟ್ಟ ಪರೀಕ್ಷೆ ನಡೆಸಿದರೂ ಖರೀದಿಗೆ ಹಿಂದೇಟು ಹಾಕುತ್ತಿರುವುದು ಸರಿಯಲ್ಲ ಎಂದರು.
ನಮ್ಮ ಭಾಗದಲ್ಲಿ ರೈತರು ಟ್ರಾೃಕ್ಟರ್ ಮೂಲಕ ಜೋಳ ಮಾರಾಟಕ್ಕೆ ಬಂದರೆ ವ್ಯಾಪಾರಿಗಳು ಲಾರಿಯಲ್ಲಿ ಬರುತ್ತಿರುವುದು ಅನುಮಾನಕ್ಕೆ ಎಡಮಾಡಿಕೊಟ್ಟಿದೆ. ರೈತರಿಂದ ಸುಲಭವಾಗಿ ಜೋಳ ಖರೀದಿ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಎಚ್ಚರಿಸಿದರು.
ಉತ್ತನೂರು ಗ್ರಾಮದ ಮಲ್ಲಮ್ಮ ಮಾತನಾಡಿ, ಜೋಳ ಖರೀದಿ ಕೇಂದ್ರದ ಅಧಿಕಾರಿಗಳು ಪೋನ್ ಮಾಡಿ ನಿಮ್ಮ ಜೋಳವನ್ನು ಕರೂರು ಜೋಳ ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಬನ್ನಿ ಅಂತ ತಿಳಿಸಿದ್ದರು. ನಾವು ತಂದ ಜೋಳದ ಗುಣಮಟ್ಟ ಪರೀಕ್ಷಿಸಿ ಸಿರಗುಪ್ಪ ಎ.ಪಿ.ಎಂ.ಸಿ ಗೋದಾಮಿಗೆ ಹೋಗಿ ಜೋಳವನ್ನು ಇಳಿಸಿ ಎಂದು ಕಳಿಸಿದ್ದರು. 9 ದಿನವಾದರೂ ನಮ್ಮ ಜೋಳ ಮುಟ್ಟಿಲ್ಲ. ಈಗ ಜೋಳದಲ್ಲಿ ಹುಳುಗಳು ಇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾದರೆ ನಮ್ಮ ಪರಿಸ್ಥಿತಿ ಏನಾಗಬೇಕೆಂದು ಪ್ರಶ್ನಿಸಿದರು.