ವಿಜಯವಾಣಿ ಸುದ್ದಿಜಾಲ ಕಾರವಾರ
ಮೃತದೇಹವನ್ನು ಮರದ ಕೋಲಿಗೆ ಕಟ್ಟಿ 3 ಕಿಮೀ ಹೊತ್ತೊಯ್ದ ಘಟನೆಯ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಕೋಲಾ ತಾಲೂಕಿನ ಬೆರಡೆ ಗ್ರಾಮದಲ್ಲಿ ದಾಮೋದರ ನಾಯ್ಕ (70) ಎಂಬುವವರು ಜ.9 ರಂದು ಬೆಂಕಿ ಅನಾಹುತದಲ್ಲಿ ಮೃತಪಟ್ಟಿದ್ದರು. ಜ.10 ರಂದು ಅವರ ಶವ ಪತ್ತೆಯಾಗಿತ್ತು.
ಬೆರಡೆ ಗ್ರಾಮವು ಸೀಬರ್ಡ್ ನೌಕಾ ಯೋಜನೆಯ ಶಸ್ತ್ರಾಗಾರ ಐಎನ್‌ಎಸ್ ವಜ್ರಕೋಶದ ಆಚೆ ಇದೆ. ಗ್ರಾಮಕ್ಕೆ ವಾಹನ ತೆರಳಲು ರಸ್ತೆ ಇಲ್ಲ. ಗ್ರಾಮಸ್ಥರು ದಿನನಿತ್ಯದ ಓಡಾಟಕ್ಕೆ ಕಡಿದಾರ ಕಚ್ಚಾ ರಸ್ತೆಯನ್ನು ಬಳಸುತ್ತಾರೆ. ಶವವನ್ನು ದೂರ ಹೊತ್ತೊಯ್ಯ ಬೇಕಾದ ಕಾರಣ ಯುವಕರು ಬಿಳಿ ಬಟ್ಟೆಯಲ್ಲಿ ಅದನ್ನು ಕಟ್ಟಿ ಒಂದು ಕೋಲಿಗೆ ನೇತು ಹಾಕಿಕೊಂಡು 3 ಕಿಮೀ ನಡೆದು ಮುಖ್ಯ ರಸ್ತೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಅದೇ ಮಾದರಿಯಲ್ಲಿ ಹೊತ್ತು ತಂದು ಊರಿನಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಶವವತ್ತು ಹೊತ್ತೊಯ್ಯುವ ವಿಡಿಯೋವನ್ನು ಗ್ರಾಮಸ್ಥರೊಬ್ಬರು ಮಾಡಿದ್ದು, ಜನಪ್ರತಿನಿಧಿಗಳು ಕಣ್ಣು ಬಿಡಬೇಕು. ಗ್ರಾಮದ ದುಸ್ಥಿತಿ ಇದು ಎಂದು ಹಿನ್ನೆಲೆ ಧ್ವನಿ ನೀಡಿ, ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಗ್ರಾಮಸ್ಥರ ದುಸ್ಥಿತಿಗೆ ನೆಟ್ಟಿಗರು ಮರುಗಿದ್ದಾರೆ.