ಜಿಲ್ಲೆ

ಜೋಪಡಿ ವಾಸಕ್ಕೆ ಸಿಕ್ತು ಮುಕ್ತಿ

ಬೂದಿಕೋಟೆ: ಅಧಿಕಾರಕ್ಕೆ ಬರುವ ಎಲ್ಲ ಸರ್ಕಾರಗಳು ಗುಡಿಸಲುಮುಕ್ತ ರಾಜ್ಯ ನಿರ್ಮಿಸುವುದಾಗಿ ೋಷಿಸಿದರೂ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂಬುದಕ್ಕೆ ಬಂಗಾರಪೇಟೆ ತಾಲೂಕಿನ ಕಾರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಾವರನಹಳ್ಳಿ ವೆಂಕಟಮ್ಮ ವೆಂಕಟಮ್ಮ ಸಾಕ್ಷಿ.

ಬಡವರಿಗಾಗಿ ಪ್ರತಿವರ್ಷ ಇಷ್ಟಿಷ್ಟು ಮನೆ ಹಂಚಲಾಗುವುದು ಎಂದು ಹೇಳುವ ಮೂಲಕ ಸ್ವಂತ ಸೂರಿಲ್ಲದವರ ಮೂಗಿಗೆ ಸರ್ಕಾರಗಳು ತುಪ್ಪ ಸವರುತ್ತಲೇ ಇವೆ. ವೆಂಕಟಮ್ಮ ಹಲವು ವರ್ಷಗಳಿಂದ ಜೋಪಡಿಯಲ್ಲೇ ಇಬ್ಬರು ಮಾನಸಿಕ ಅಸ್ವಸ್ಥ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ದುಡಿಯುವವರು ಇಲ್ಲ. ವೆಂಕಟಮ್ಮಗೆ ದುಡಿಯುವ ಶಕ್ತಿಯೂ ಇಲ್ಲ. ಸರ್ಕಾರದ ಪಡಿತರ ನಂಬಿ ಬದುಕುತ್ತಿದ್ದಾರೆ.

20 ವರ್ಷಗಳ ಹಿಂದೆ ವೆಂಕಟಮ್ಮಅವರ ಗಂಡ ಕೂಲಿ ಮಾಡಿ ಕುಟುಂಬ ಪೋಷಣೆ ಮಾಡುತ್ತಿದ್ದರು. ಗಂಡ ಮೃತಪಟ್ಟ ಬಳಿಕ ಕುಟುಂಬಕ್ಕೆ ಯಾರೂ ಆಸರೆ ಇಲ್ಲದಂತಾಗಿದೆ. ಪತಿ ಇದ್ದಾಗ ಪುಟ್ಟ ಮನೆಯಲ್ಲಿ ವಾಸವಿದ್ದರು. ಈಗ ಅದು ಸಂಪೂರ್ಣವಾಗಿ ಬೀಳುವ ಹಂತಕ್ಕೆ ತಲುಪಿದೆ. ಹೆಂಚುಗಳೆಲ್ಲಾ ಪುಡಿ ಪುಡಿಯಾಗಿ ಮೇಲ್ಚಾವಣಿಯೇ ಇಲ್ಲದಂತಾಗಿದೆ. ಮಳೆಗೆ ಗೋಡೆ ಬೀಳುತ್ತಿದ್ದು, ದುರಸ್ತಿ ಮಾಡಿಸಿಕೊಳ್ಳಲೂ ಬಡತನ ಅಡ್ಡಿಯಾಗಿದೆ. ಮಳೆಗಾಲದಲ್ಲಿ ಬೇರೆಡೆ ಹೋಗಿ ಆಶ್ರಯಪಡಬೇಕಾದ ಪರಿಸ್ಥಿತಿ ಇದ್ದು, ಹತ್ತಿರದ ಹೊಲಗಳೇ ಶೌಚಗೃಹಗಳಾಗಿವೆ.

ಸಿಗದ ಆಶ್ರಯ ಮನೆ: ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿ ಕೊಡಿ ಎಂದು ವೆಂಕಟಮ್ಮ ದಶಕಗಳಿಂದ ಪಂಚಾಯಿತಿ ಆಡಳಿತ ಮಂಡಳಿಯನ್ನು ಕೇಳಿಕೊಂಡರೂ ವೃದ್ಧೆಯ ಕೂಗು ಯಾರಿಗೂ ಕೇಳಿಸಲಿಲ್ಲ. ವೆಂಕಟಮ್ಮ ಅವರ ಸ್ಥಿತಿ ಕಂಡ ಕರ್ನಾಟಕ ಸಿಂಹ ಘರ್ಜನೆ ವೇದಿಕೆಯ ಪ್ರಸನ್ನಕುಮಾರ ಸ್ವಾಮಿ ಸ್ವಂತ ಸೂರು ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಜತೆಗೆ ಕಾರಹಳ್ಳಿ ಗ್ರಾಪಂ ಸದಸ್ಯರಾದ ರಮೇಶ್, ಆಂಜಿನಪ್ಪ, ಬೆಟ್ಟಪ್ಪ ಸಹ ಕೈ ಜೋಡಿಸಿದ್ದಾರೆ. ಮನೆ ನಿರ್ಮಾಣವಾಗುತ್ತಿದ್ದು, ಅಂದುಕೊಂಡಂತೆ ಆದರೆ ಮುಂದಿನ ಹತ್ತು ದಿನದೊಳಗೆ ಗೃಹ ಪ್ರವೇಶ ನೆರವೇರಲಿದೆ.

ಪಂಚಾಯಿತಿಯವರು ವೆಂಕಟಮ್ಮಗೆ ಮನೆ ನಿರ್ಮಿಸಿ ಕೊಡಲು ವಿಫಲರಾಗಿದ್ದಾರೆ. ಅವರ ಪರಿಸ್ಥಿತಿ ಕಂಡು ನೆರವಿಗೆ ಧಾವಿಸಿದ್ದೇವೆ. ಅನುದಾನದ ಕೊರತೆ ಎಂದು ಪಿಡಿಒ ಸಬೂಬು ಹೇಳುತ್ತಿದ್ದ ಕಾರಣ ಮೂವರು ಪಂಚಾಯಿತಿ ಸದಸ್ಯರೊಟ್ಟಿಗೆ ಸೇರಿ ಚಿಕ್ಕ ಮನೆ ನಿರ್ಮಿಸುತ್ತಿದ್ದೇವೆ. ಪ್ರಸನ್ನಕುಮಾರಸ್ವಾಮಿ, ಕರ್ನಾಟಕ ಸಿಂಹ ಘರ್ಜನೆ ವೇದಿಕೆ