ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಮುಂದಾಳತ್ವದಲ್ಲಿ ಆಯೋಜಿಸಿರುವ ಭಾರತ ಐಕ್ಯತೆ (ಭಾರತ್ ಜೋಡೋ) ಪಾದಯಾತ್ರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 5 ಸಾವಿರ ಜನರನ್ನು ಸೇರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾಕೀತು ಮಾಡಿದರು.
ಭಾರತ ಐಕ್ಯತೆ ಪಾದಯಾತ್ರೆ ಕುರಿತು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್‌ನಿಂದ ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರು, ಮುಖಂಡರ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಿ ಹುದ್ದೆ ಅಲಂಕರಿಸುವ ಅವಕಾಶ ಇದ್ದರೂ ಅದನ್ನು ತ್ಯಜಿಸಿದ ರಾಹುಲ್ ಗಾಂಧಿ ಅವರು, ಸ್ವಾರ್ಥ, ಅಧಿಕಾರದ ಆಸೆ ಇಲ್ಲದೆ ದೇಶದ ಐಕ್ಯತೆ, ಶಾಂತಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ. ಪಾದಯಾತ್ರೆ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದಲ್ಲಿ ನಡೆಯುತ್ತಿರುವ ಅತಿದೊಡ್ಡ ಪಾದಯಾತ್ರೆ ಇದಾಗಿದೆ ಎಂದು ಬಣ್ಣಿಸಿದರು.
ಕನ್ಯಾಕುಮಾರಿಯಿಂದ ಹೊರಟು ಕೇರಳ ತಲುಪಿರುವ ಪಾದಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆ.30ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಲಿದೆ. ಮೈಸೂರಿಗೆ ಬಂದಾಗ ಯಶಸ್ವಿಗೊಳಿಸಬೇಕು. ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಸಾವಿರ ಜನ ಆಗಮಿಸಬೇಕು. ಮೈಸೂರು ಜಿಲ್ಲೆಯ ಪ್ರತಿ ಕ್ಷೇತ್ರದಿಂದ 10 ರಿಂದ 15 ಸಾವಿರ ಜನರು ಭಾಗವಹಿಸಬೇಕು ಎಂದು ಹೇಳಿದರು.
ಬಿಜೆಪಿ ಸರ್ಕಾರ ದೇಶವನ್ನು ಹಾಳು ಮಾಡುತ್ತಿದ್ದು, ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಯುವಕರಿಗೆ ಉದ್ಯೊಗ ಇಲ್ಲ, ಕೆಲಸಕ್ಕೆ ಲಂಚ ಕೊಡಬೇಕು. ಸಾಮಾನ್ಯ ಜನರು ಬದುಕಲಾಗದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸಾಮಾನ್ಯ ಜನರ ಪರ ಪಾದಯಾತ್ರೆ ನಡೆಯುತ್ತಿದ್ದು, ಇದಕ್ಕೆ ಕಾರ್ಯಕರ್ತರು ಹೆಗಲು ಕೊಟ್ಟು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಯಾವ ಕ್ಷೇತ್ರದಿಂದ ಎಷ್ಟು ಜನರನ್ನು ಕರೆತರಲಾಗಿದೆ, ಎಷ್ಟು ವಾಹನಗಳು ಬಂದಿದೆ ಎನ್ನುವುದನ್ನು ಲೆಕ್ಕ ಹಾಕಲಾಗುವುದು. ಅಲ್ಲದೆ, ಕಾರ್ಯಕ್ರಮ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಮೇಲುಸ್ತುವಾರಿಗಳನ್ನು ನೇಮಿಸಲಾಗಿದೆ. ಹೀಗಾಗಿ ಯಾರೂ ಸುಮ್ಮನೆ ಪೋಸ್ ಕೊಡಲು ಸಾಧ್ಯವಿಲ್ಲ. ಪದಾಧಿಕಾರಿಗಳನ್ನಾಗಿ ನೇಮಿಸುವಾಗ, ಟಿಕೆಟ್ ಕೇಳುವಾಗ ಇದನ್ನೆಲ್ಲ ಪರಿಗಣಿಸಲಾಗುವುದು ಎಂದು ಕಾರ್ಯಕರ್ತರಿಗೆ ಎಚ್ಚರಿಸಿದರು.
ಮರ್ಯಾದೆ ಹೋಗುತ್ತದೆ:
ರಾಹುಲ್‌ಗಾಂಧಿ ಪಾದಯಾತ್ರೆ ವೇಳೆ ನಿರೀಕ್ಷಿಸಿದಷ್ಟು ಕಾರ್ಯಕರ್ತರು ಹೋಗದಿದ್ದರೆ ನನ್ನ ಹಾಗೂ ಸಿದ್ದರಾಮಯ್ಯ ಅವರ ಮರ್ಯಾದೆ ಹೋಗುತ್ತದೆ. ಮೈಸೂರಿನ ಮಾನ ಹೋಗುತ್ತದೆ. ಹಾಗಾಗಿ ಮರ್ಯಾದೆ ಉಳಿಸುವುದು, ಬಿಡುವುದು ಕಾರ್ಯಕರ್ತರ ಮೇಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರತಿ ಮನೆಗೆ ಕರಪತ್ರ ಹಂಚಿ, ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಮಾಡಬೇಕು. ಕನಿಷ್ಠ ನೂರು ಜನರನ್ನು ಸೇರಿಸುವ ಹೊಣೆ ಪ್ರತಿ ನಾಯಕರ ಮೇಲಿದೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಪಾದಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಬದನವಾಳುವಿನಲ್ಲಿ ಆಚರಿಸುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದು 500 ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ನಗರದ ವಸ್ತು ಪ್ರದರ್ಶನ ಮೈದಾನದಲ್ಲಿ ಒಂದು ರಾತ್ರಿ ಉಳಿದು ಮರು ದಿನ ಅ.3ರಂದು ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಮೂಲಕ ಸಿದ್ದಲಿಂಗಪುರ ಮೂಲಕ ಶ್ರೀರಂಗಪಟ್ಟಣಕ್ಕೆ ಪಯಣ ಬೆಳೆಸಲಿದ್ದಾರೆ ಎಂದು ಹೇಳಿದರು.
ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಜಾನ್ ರೋಸಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ತನ್ವಿರ್ ಸೇಠ್, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಆರ್.ಧರ್ಮಸೇನ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಇತರರು ಇದ್ದರು.