ಜಿಲ್ಲೆ

ಜೋಡುರಸ್ತೆಗೆ ಬೇಕು ಬಸ್ ತಂಗುದಾಣ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಒಂದು ಕಾಲದಲ್ಲಿ ಬೆರಳೆಣಿಕೆಯ ಅಂಗಡಿ-ಮುಂಗಟ್ಟುಗಳಿದ್ದ ಕಾರ್ಕಳ ಜೋಡುರಸ್ತೆ ಇದೀಗ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಪಟ್ಟಣ ಪ್ರದೇಶವಾಗಿ ಬೆಳೆಯುತ್ತಿದ್ದು, ಸಾರ್ವಜನಿಕರ ಅನುಕೂಲತೆಗಾಗಿ ಇಲ್ಲೊಂದು ಸುಸಜ್ಜಿತ ಬಸ್ ನಿಲ್ದಾಣ ಬೇಕು ಎಂಬ ಕೂಗು ಕೇಳಿ ಬಂದಿದೆ.

ಕೆಲ ವರ್ಷಗಳಿಂದ ಸಮಗ್ರ ಅಭಿವೃದ್ಧಿ ಕಂಡ ಜೋಡುರಸ್ತೆ ಪ್ರಮುಖ ಜಂಕ್ಷನ್ ಪ್ರದೇಶವಾಗಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರು ಕಾರ್ಕಳದತ್ತ ಆಗಮಿಸುತ್ತಿದ್ದು, ಕಾರ್ಕಳ ಮುಖ್ಯ ಪೇಟೆಯ ಕೆಲವೇ ಕಿ.ಮೀ ದೂರದಲ್ಲಿ ಎರಡನೇ ಪೇಟೆಯಾಗಿ ಜೋಡುರಸ್ತೆ ಬೆಳೆಯುತ್ತಿದೆ.

ಪ್ರಮುಖ ಜಂಕ್ಷನ್

ಕಾರ್ಕಳ ಪೇಟೆಯ ಹೆಬ್ಬಾಗಿಲಿನಂತೆ ಇರುವ ಜೋಡುರಸ್ತೆಯು ಆಗುಂಬೆೆ, ಶಿವಮೊಗ್ಗ ಹಾಗೂ ಉಡುಪಿ-ಮಣಿಪಾಲ, ಹೆಬ್ರಿ ಭಾಗದಿಂದ ಬಂದು ಕಾರ್ಕಳಕ್ಕೆ ಸಂಪರ್ಕ ಪಡೆಯುವ ಪ್ರಮುಖ ಜಂಕ್ಷನ್ ಆಗಿದೆ. ಪೇಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಕಟ್ಟಡಗಳು, ಮಳಿಗೆಗಳು, ವಾಣಿಜ್ಯ ಕೇಂದ್ರಗಳಿಗೆ ಬರುವ ಜನರು ಬಸ್ ಕಾಯಲು ರಸ್ತೆ ಬದಿಯಲ್ಲಿ ನಿಲ್ಲುವಂತಾಗಿದೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ವೇಗವಾಗಿ ವಾಹನ ಸಂಚರಿಸುತ್ತಿರುತ್ತವೆ. ಹೀಗಾಗಿ ರಸ್ತೆ ಬದಿಯಲ್ಲಿ ಮಕ್ಕಳು ಹಾಗೂ ಪ್ರಯಾಣಿಕರು ನಿಲ್ಲುವುದು ಅಪಾಯಕಾರಿಯಾಗಿದೆ. ಹೀಗಾಗಿ ಇಲ್ಲೊಂದು ಬಸ್ ತಂಗುದಾಣದ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.

ರಸ್ತೆ ಬದಿ, ಮರದಡಿಯೇ ಗತಿ

ನಿತ್ಯ ಕೆಲಸಕ್ಕೆ ಬಂದ ಕಾರ್ಮಿಕರು, ಫ್ಯಾಕ್ಟರಿ ಕಾರ್ಮಿಕ ಮಹಿಳೆಯರು, ಶಾಲಾ-ಕಾಲೇಜಿಗೆ ತೆರಳುವ ಮಕ್ಕಳು ರಸ್ತೆ ಬದಿಯಲ್ಲಿ, ಮರದ ಅಡಿಯಲ್ಲಿ ನಿಂತು ಬಸ್ ಯಾವಾಗ ಬರುತ್ತದೆ ಎಂದು ಕಾಯುತ್ತಾರೆ. ಮಳೆಗಾಲದಲ್ಲಿ ಇದು ಅಪಾಯಕಾರಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಎರಡನೇ ನಗರವಾಗಿ ರೂಪು

ಕುಕ್ಕುಂದೂರು ಗ್ರಾಪಂ ವ್ಯಾಪ್ತಿಯ ಜೋಡುರಸ್ತೆ ಅಭಿವೃದ್ಧಿಗಾಗಿ ಮಾಜಿ ಸಚಿವ, ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ ಅವರು 6.5 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಿದ್ದರು. ಕಾಲುದಾರಿಗಳ ನಿರ್ಮಾಣ, ಆರ್‌ಸಿಸಿ ಚರಂಡಿ ನಿರ್ಮಾಣ, ರಸ್ತೆಯ ಬದಿ ಇಂಟರ್‌ಲಾಕ್ ಅಳವಡಿಕೆ, ರಸ್ತೆ ಅಗಲೀಕರಣ, ಡಾಂಬರು ಕಾಮಗಾರಿ, ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಪಾದಚಾರಿಗಳಿಗೆ ಕಾಲುದಾರಿ, ರಸ್ತೆಯ ಡಿವೈಡರ್‌ಗಳಿಗೆ ಅಲಂಕಾರಿಕ ಹೈಟೆಕ್ ದಾರಿದೀಪ ಅಳವಡಿಕೆ ಇತ್ಯಾದಿ ಸೌಲಭ್ಯ ನೀಡಿ ಪೇಟೆಯನ್ನು ಎರಡನೇ ನಗರವನ್ನಾಗಿ ರೂಪಿಸಿದ್ದರು.

ಜೋಡುರಸ್ತೆ ಈಗ ಸಾಕಷ್ಟು ಅಭಿವೃದ್ಧಿಯಾಗಿದೆ. ಹೀಗಾಗಿ ಇಲ್ಲಿಗೆ ಬರುವ ಸಾರ್ವಜನಿಕರಿಗೆ ಬಸ್ ಕಾಯಲು ಸುಸಜ್ಜಿತ ತಂಗುದಾಣ ನಿರ್ಮಾಣದ ಅಗತ್ಯವಿದೆ.- ಸುರೇಶ ಶೆಟ್ಟಿ ನಾಗರಿಕ
ಜೋಡುರಸ್ತೆಯಲ್ಲಿ ನಿಲ್ದಾಣದ ಅಗತ್ಯ ಖಂಡಿತ ಇದೆ. ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಖಾಸಗಿ ಸಂಘ-ಸಂಸ್ಥೆಗಳು ಮುಂದೆ ಬಂದಿವೆ. ಈ ಬಗ್ಗೆ ಪಂಚಾಯಿತಿಯಲ್ಲಿಯೂ ಚರ್ಚೆ ನಡೆದಿದೆ.- ಪ್ರದೀಪ್‌ಕುಮಾರ ಶೆಟ್ಟಿ ಪಿಡಿಒ, ಕುಕ್ಕುಂದೂರು