ಜಿಲ್ಲೆ

ಜೋಡಿ ಮಾರಮ್ಮ ದೇಗುಲ ಟ್ರಸ್ಟ್ ರಚನೆ

ಮೈಸೂರು: ನಗರದ ಪಡುವಾರಹಳ್ಳಿ ಜೋಡಿ ಮಾರಮ್ಮ (ಮಾರಿಗುಡಿ) ದೇವಾಲಯಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ರಚಿಸಲಾಗಿದ್ದು, ಇದರ ಮೂಲಕ ಸೇವಾ ಕಾರ್ಯ ಮುಂದುವರಿಯಲಿದೆ ಎಂದು ಟ್ರಸ್ಟ್‌ನ ಖಜಾಂಚಿ ಪ್ರದೀಪ್‌ನಾಯಕ ತಿಳಿಸಿದರು.
ನೂರು ವರ್ಷಗಳಷ್ಟು ಇತಿಹಾಸವಿರುವ ದೇವಸ್ಥಾನಕ್ಕೆ ಇದುವರೆಗೂ ಸಂಘಟಿತ ಸಂಘಟನೆ ಇರಲಿಲ್ಲ. ಹಬ್ಬ, ವಿಶೇಷ ದಿನಗಳಲ್ಲಿ ಎಲ್ಲರೂ ಸೇರಿ ಪೂಜೆ, ಕಾರ್ಯ ಮಾಡಿಕೊಂಡು ಬರಲಾಗುತ್ತಿತ್ತು. ಈಗ ದೇವಸ್ಥಾನದ ಬೆಳವಣಿಗೆ ಹಾಗೂ ದೇವಸ್ಥಾನದ ಸುತ್ತಮುತ್ತಲಿನ ಆಸ್ತಿಯ ರಕ್ಷಣೆ ಉದ್ದೇಶದಿಂದ ಟ್ರಸ್ಟ್ ರಚಿಸಿ ನೋಂದಾಯಿಸಿಕೊಳ್ಳಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಟ್ರಸ್ಟ್ ಅಧ್ಯಕ್ಷರಾಗಿ ಚಿಕ್ಕ ಅರಸನಾಯಕ ನೇಮಕಗೊಂಡಿದ್ದು, ದೇವಾಲಯದ ಆಸ್ತಿಗಳ ಉಸ್ತುವಾರಿ, ದೇವಸ್ಥಾನದ ಅಭಿವೃದ್ಧಿ ಕೆಲಸ, ದೈನಂದಿನ ವ್ಯವಹಾರ ನೋಡಿಕೊಳ್ಳಲಿದ್ದಾರೆ. ದೇವಾಲಯಕ್ಕೆ ಸೇರಿದ ಸ್ವತ್ತುಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಅಧ್ಯಕ್ಷರು ಹಾಗೂ ಟ್ರಸ್ ಸದಸ್ಯರು ನಿರ್ವಹಿಸಲಿದ್ದಾರೆ. ರಾಚನಾಯಕ ಉಪಾಧ್ಯಕ್ಷ, ಲಕ್ಷ್ಮೀನಾರಾಯಣ ಕಾರ್ಯದರ್ಶಿ, ಮಾಣಿಕ್ಯಕುಮಾರ ನಾಯಕ ಸಹ ಕಾರ್ಯದರ್ಶಿ, ಪ್ರದೀಕ್‌ನಾಯಕ ಖಜಾಂಚಿ ಆಗಿರಲಿದ್ದು, ಉಳಿದಂತೆ ಒಟ್ಟು 19 ಜನರು ಟ್ರಸ್ಟಿಗಳು ಇರಲಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನವನ್ನು ಪೂಜೆ ಮಾಡುವ ಕುಟುಂಬಗಳು ಸೇರಿಕೊಂಡು ಈ ಟ್ರಸ್ಟ್ ರಚಿಸಲಾಗಿದೆ. ಮುಂದೆ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು, ದಾನಿಗಳು ದೇಣಿಗೆ ನೀಡಬಹುದಾಗಿದೆ ಎಂದು ಮನವಿ ಮಾಡಿದರು. ಟ್ರಸ್ಟ್ ಅಧ್ಯಕ್ಷ ಚಿಕ್ಕ ಅರಸನಾಯಕ, ಉಪಾಧ್ಯಕ್ಷ ರಾಚನಾಯಕ, ಟ್ರಸ್ಟಿ ಶಶಿಕುಮಾರ್ ಇತರರು ಇದ್ದರು.