ಜಿಲ್ಲೆ

ಜೋಪಡಿಯೇ ಜೀವನಾಧಾರ

ರಾಜೇಂದ್ರ ಶಿಂಗನಮನೆ ಶಿರಸಿ

ಎರಡು ವರ್ಷಗಳ ಹಿಂದೆ ಅತಿವೃಷ್ಟಿಯ ಕಾರಣದಿಂದ ಸೂರು ಕಳೆದುಕೊಂಡ ತಾಲೂಕಿನ 110 ಕುಟುಂಬಗಳ ಶಾಶ್ವತ ಸೂರಿನ ಕನಸು ಇಂದಿಗೂ ಈಡೇರಿಲ್ಲ. ಸರ್ಕಾರದಿಂದ ಪರಿಹಾರ ಬಾರದ ಕಾರಣ ಜೋಪಡಿಯೇ ಇವರಿಗೆ ಜೀವನಾಧಾರವಾಗಿದೆ!

2019ರಲ್ಲಿ ಎದುರಾದ ಅತಿವೃಷ್ಟಿಗೆ ತಾಲೂಕಿನ ವಿವಿಧ ಭಾಗಗಳಲ್ಲಿ ಸಾಕಷ್ಟು ಮನೆಗಳು ಸಂಪೂರ್ಣ ಹಾಗೂ ಭಾಗಶಃ ನಾಶವಾಗಿದ್ದವು. ಸಂತ್ರಸ್ತರನ್ನು ಎ ಮತ್ತು ಬಿ ವರ್ಗಗಳಾಗಿ ವಿಂಗಡಿಸಿ ಅವರ ಮನೆಗಳ ಮರು ನಿರ್ವಣಕ್ಕೆ ತಲಾ 5 ಲಕ್ಷ ರೂಪಾಯಿ ನೆರವು ಘೊಷಿಸಿ, ಅದರಲ್ಲಿ ತಕ್ಷಣ 1 ಲಕ್ಷ ರೂಪಾಯಿ ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಪಾವತಿಸಿತ್ತು. ಉಳಿದ ಹಣವನ್ನು ಕೂಡ ತಕ್ಷಣವೇ ನೀಡುವುದಾಗಿ ತಿಳಿಸಿತ್ತು. ಆದರೆ, 2 ವರ್ಷ ಕಳೆದರೂ ಇನ್ನೂ ತಲಾ 4 ಲಕ್ಷ ರೂ.ಗಳಂತೆ 4 ಕೋಟಿ ರೂಪಾಯಿಯನ್ನು ಸರ್ಕಾರ ನೀಡಬೇಕಿದೆ. ಹೀಗಾಗಿ 1 ಲಕ್ಷ ರೂಪಾಯಿಗಳಲ್ಲಿ ಮನೆಯ ತಳಪಾಯ ಹಾಕಿಸಿಕೊಂಡವರು ಇಂದಿಗೂ ಅದೇ ಸ್ಥಿತಿಯಲ್ಲಿದ್ದು, ಉಳಿದುಕೊಳ್ಳಲು ಶೆಡ್ ಹಾಗೂ ಜೋಪಡಿಯನ್ನು ಆಶ್ರಯಿಸಿದ್ದಾರೆ.

ಕೂಡಲೆ ಪ್ರಾರಂಭಿಸಿ: ತಕ್ಷಣದ ಸ್ಪಂದನೆಯಾಗಿ 1 ಲಕ್ಷ ರೂಪಾಯಿಗಳನ್ನು ನೀಡಿದ್ದ ಸರ್ಕಾರವು ಸಂತ್ರಸ್ತರಿಗೆ ಉಳಿದ 4 ಲಕ್ಷ ರೂಪಾಯಿ ಪರಿಹಾರವನ್ನು, ನಿರ್ವಣವಾಗುತ್ತಿರುವ ಮನೆಯ ಹಂತವಾರು ಜಿಪಿಎಸ್ ದಾಖಲೆಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತ್ತು. ಕೂಡಲೆ ಮನೆ ನಿರ್ಮಾಣ ಪ್ರಾರಂಭಿಸಿ ಬೇಗನೆ ಪೂರ್ಣಗೋಳಿಸಬೇಕೆಂದು 2019ರ ಡಿ.13ರಂದು ಸ್ವತಃ ಮುಖ್ಯಮಂತ್ರಿಯ ಸಹಿವುಳ್ಳ ಘೊಷಣಾ ಪತ್ರವನ್ನೂ ನೀಡಲಾಗಿತ್ತು. ಅದರಂತೆ ಹೊಸ ಮನೆಗಳನ್ನು ನಿರ್ವಿುಸಲು ಸಂತ್ರಸ್ತರು ಮುಂದಾಗಿ ಅಡಿಪಾಯದವರೆಗೆ ಕಾರ್ಯ ಸಾಗಿತ್ತು. ಮುಂದಿನ ಹಂತ ನಿರ್ವಿುಸಲು ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಇಂದಿಗೂ ಅದೇ ಸ್ಥಿತಿಯಲ್ಲಿ ಸಂತ್ರಸ್ತರ ಸೂರು ಅರೆಬರೆಯಾಗಿದೆ. 100 ಕುಟುಂಬಗಳ ಮನೆಯ ಜಿಪಿಎಸ್ ಕಾರ್ಯವಾಗಿದೆ. ಉಳಿದ ಮನೆಗಳು ತಳಪಾಯದವರೆಗೆ ನಿರ್ವಿುಸಿ ಹಾಗೆಯೇ ಬಿಟ್ಟು ವರ್ಷ ಕಳೆದಿದೆ. 10 ಕುಟುಂಬಗಳು ಅತಿಕ್ರಮಣ ಜಾಗದಲ್ಲಿವೆ ಎಂಬ ಕಾರಣಕ್ಕೆ ಜಿಪಿಎಸ್ ಕಾರ್ಯ ನಡೆಸಿಲ್ಲ.

ಪರಿಹಾರ ವಿತರಣೆ ಸಂಬಂಧ ಹಂತಹಂತವಾಗಿ ಹಣ ನೀಡಲು ಸರ್ಕಾರ ಸೂಚಿಸಿದೆ. ಮನೆಯ ಪ್ರತಿ ಹಂತದ ಜಿಪಿಎಸ್ ಕಾರ್ಯ ಪೂರ್ಣಗೊಂಡ ನಂತರ ಅದನ್ನು ಸರ್ಕಾರಕ್ಕೆ ಸಲ್ಲಿಸಿ ಅಲ್ಲಿ ಹಣ ಬಿಡುಗಡೆಯಾದ ನಂತರ ಆಯಾ ಫಲಾನುಭವಿ ಖಾತೆಗೆ ಜಮಾ ಮಾಡಲಾಗುವುದು. | ಎಂ.ಆರ್. ಕುಲಕರ್ಣಿ ತಹಸೀಲ್ದಾರ್
ಮನೆ ಬಿದ್ದ ಸಂದರ್ಭದಲ್ಲಿ ಸರ್ಕಾರದಿಂದ 5 ಲಕ್ಷ ರೂ. ನೀಡುವುದಾಗಿ ಘೊಷಣೆ ಪತ್ರ ನೀಡಲಾಗಿತ್ತು. ಆದರೆ 2 ವರ್ಷ ಕಳೆದರೂ ಇನ್ನೂ ಭರವಸೆ ಈಡೇರಿಸಿಲ್ಲ. ಸರ್ಕಾರ ನೀಡಿದ 1 ಲಕ್ಷ ರೂ.ಗಳಲ್ಲಿ ಮನೆಯ ತಳಪಾಯ ಸಿದ್ಧಪಡಿಸಿದ್ದು, ಮನೆ ಪೂರ್ಣಗೊಳಿಸಲು ನಮ್ಮಲ್ಲಿ ಹಣವಿಲ್ಲ. ಸರ್ಕಾರ ನೀಡುವುದಾಗಿ ಹೇಳಿದ ಪರಿಹಾರ ಮೊತ್ತ ನೀಡಿದರೆ ಶಾಶ್ವತವಾದ ಸೂರು ಸಾಧ್ಯವಾಗುತ್ತದೆ. ಇಲ್ಲವಾದರೆ ಜೋಪಡಿಯೇ ಗತಿಯಾಗಿದೆ. | ಗಂಗಮ್ಮ ಶಿಳ್ಳೆಕ್ಯಾತರ್ ದೊಡ್ನಳ್ಳಿ ಸಂತ್ರಸ್ತೆ