ಜಿಲ್ಲೆ

ಜೊಯಿಡಾಕ್ಕೆ ಅಟಕಾಯಿಸಿದ ಚೀನಾ ಜಾಡ್ಯ

ಜೊಯಿಡಾ: ಭೂ ಭಾಗದ ಅತಿ ಹೆಚ್ಚು ಭಾಗ ಕಾಡು ತುಂಬಿರುವ, ಅತಿ ಕಡಿಮೆ ಜನಸಂಖ್ಯೆ ಇರುವ ಜೊಯಿಡಾ ಭಾಗದಲ್ಲೂ ಕರೊನಾ ತಾಂಡವವಾಡುತ್ತಿದೆ. ಕಳೆದ 25 ದಿನಗಳಲ್ಲಿ ತಾಲೂಕಿನಲ್ಲಿ 1086 ಕರೊನಾ ಪ್ರಕರಣಗಳು ಪತ್ತೆಯಾಗಿವೆ. 13 ಜನ ಮೃತಪಟ್ಟಿದ್ದಾರೆ.

ಮೇ 1 ರವರೆಗೆ ತಾಲೂಕಿನ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆಯೇ 444 ಇತ್ತು. ಈಗ ಒಟ್ಟಾರೆ ಸೋಂಕಿತರ ಸಂಖ್ಯೆ 1530 ಕ್ಕೆ ಏರಿದೆ. ಇದುವರೆಗೆ 16 ಸಾವು ಸಂಭವಿಸಿದೆ. 438 ಸಕ್ರಿಯ ಪ್ರಕರಣಗಳಿವೆ. ದಿನಕ್ಕೆ ನೂರಾರು ಪ್ರಕರಣಗಳು, ನಾಲ್ಕಾರು ಸಾವು ಸಂಭವಿಸುತ್ತಿರುವ ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಕಡಿಮೆಯೇ ಇರಬಹುದು ಆದರೆ, ಕೇವಲ 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ, ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನೂ ಹೊಂದಿರದ ಅತಿ ಕಡಿಮೆ ಜನಸಾಂದ್ರತೆ ಇರುವ ತಾಲೂಕಿಗೆ ಇದು ದೊಡ್ಡ ಸಂಖ್ಯೆಯಾಗಿದೆ.

ಏರಿಕೆಗೆ ಕಾರಣವೇನು?: ಮೊದಲ ಅಲೆಯ ಸಂದರ್ಭದಲ್ಲಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ತೀರ ಕಡಿಮೆ ಇತ್ತು. ಒಂದೂ ಸಾವು ಸಂಭವಿಸಿರಲಿಲ್ಲ. ಇಲ್ಲಿನ ಜೀವನ ಪದ್ಧತಿ, ಆಹಾರ ಪದ್ಧತಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಎರಡನೇ ಅಲೆ ಜನರ ನಂಬಿಕೆಯನ್ನು ಹುಸಿ ಮಾಡಿದೆ. ಹಳ್ಳಿ, ಹಳ್ಳಿಗಳಲ್ಲಿ ಕರೊನಾ ಜ್ವರ ವಿಪರೀತವಾಗಲು ಕಾರಣವೇನು ಎಂದು ಅವಲೋಕಿಸಿದರೆ, ಜನತಾ ಕರ್ಫ್ಯೂ ನಂತರವೂ ನಡೆದ ಮದುವೆ ಹಾಗೂ ಹೊರ ಊರಿನಿಂದ ಬಂದವರು ಎನ್ನುತ್ತಾರೆ ಸ್ಥಳೀಯರು.

ಏಪ್ರಿಲ್​ನಲ್ಲಿ ಮಹಾರಾಷ್ಟ್ರದಲ್ಲಿ ಕರೊನಾ ಅಲೆ ವ್ಯಾಪಕವಾಗುತ್ತಿದ್ದಂತೆ ಅಲ್ಲಿ ಕೂಲಿ ಕೆಲಸ, ಗಾರೆ ಕೆಲಸ ಹಾಗೂ ಇತರ ನೌಕರಿ ಮಾಡಿಕೊಂಡಿದ್ದ ಹಲವರು ಲಾಕ್​ಡೌನ್ ಭಯದಿಂದ ತಮ್ಮ ಸ್ವಂತ ಊರಿನತ್ತ ಧಾವಿಸಿದ್ದಾರೆ. ಲಾಕ್​ಡೌನ್ ನಂತರ 67 ವಿವಾಹ, ಮೇ ತಿಂಗಳಲ್ಲಿ 105 ವಿವಾಹ ಸಮಾರಂಭಗಳು ತಾಲೂಕಿನಲ್ಲಿ ಅನುಮತಿ ಪಡೆದು ನಡೆದವು. ಇವು ಹಳ್ಳಿಹಳ್ಳಿಗೂ ರೋಗ ಹರಡಲು ಕಾರಣವಾದವು.

ಖಾಸಗಿ ಆಸ್ಪತ್ರೆ ಬಂದ್: ರಾಮನಗರ ಭಾಗದಲ್ಲಿ ಕೆಲ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದ ಕೆಲವರು ಗಂಭೀರ ಸ್ಥಿತಿಗೆ ತಲುಪಿದ ಸಾಕಷ್ಟು ಉದಾಹರಣೆಗಳಿವೆ. ಉಸಿರಾಟದ ತೊಂದರೆ ಉಂಟಾದ ಬಳಿಕ ಸರ್ಕಾರಿ ಆಸ್ಪತ್ರೆಗೆ ಹಣ ಇದ್ದವರು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೊನೆ ಘಳಿಗೆಯಲ್ಲಿ ಆಸ್ಪತ್ರೆಗಳಿಗೆ ತೆರಳುವುದರಿಂದ ಜೀವ ಕಳೆದುಕೊಳ್ಳುವಂತಾಗಿದೆ. ಪ್ರಜ್ಞಾವಂತರು ಈ ಬಗ್ಗೆ ದೂರಿದ ನಂತರ ನಕಲಿ ವೈದ್ಯರ ಆಸ್ಪತ್ರೆಗಳನ್ನು ಬಂದ್ ಮಾಡಲಾಗಿದ್ದು, ಜನ ಸರ್ಕಾರಿ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಇದರಿಂದ ಈಗ ಪರೀಕ್ಷೆಯ ಪ್ರಮಾಣ ಹೆಚ್ಚಿದ್ದು, ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗಿರುವುದು ಕಂಡುಬರುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಈ ಹಿಂದೆ ಕೋವಿಡ್ ನಿಯಮ ಪಾಲಿಸದೇ ಜಾತ್ರೆ, ಮದುವೆ ಮುಂತಾದ ಜನ ಸೇರುವ ಕಾರ್ಯಕ್ರಮ ನಡೆಸಿದ್ದೂ ತಾಲೂಕಿನಲ್ಲಿ ಸೋಂಕು ಹೆಚ್ಚಲು ಕಾರಣವಾಗಿದೆ. ಕರೊನಾ ಸೋಂಕಿತರು ಖಾಸಗಿ ವೈದ್ಯರಲ್ಲಿ ನಾಲ್ಕು ದಿನ ಚಿಕಿತ್ಸೆ ಪಡೆದು, ಕಡಿಮೆಯಾಗದಿದ್ದಾಗ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದರು. ಈಗ ಖಾಸಗಿ ಆಸ್ಪತ್ರೆ ಬಂದ್ ಮಾಡಿದ್ದು, ಜನ ನೇರವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಇದರಿಂದ ಈಗ ಸೋಂಕಿತರು ಶೀಘ್ರ ಗುಣವಾಗುತ್ತಿದ್ದಾರೆ.| ಡಾ. ಸುಜಾತಾ ಉಕ್ಕಲಿ ತಾಲೂಕು ವೈದ್ಯಾಧಿಕಾರಿ

ಚಿಕಿತ್ಸೆಗೆ ಮುಂದಾಗದ ಗ್ರಾಮೀಣ ಭಾಗದ ಜನ

ಕಾರವಾರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮನೆ, ಮನೆಗಳಲ್ಲಿ ಕರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು ಮುಂತಾದ ತೊಂದರೆಗಳು ಕಂಡುಬರುತ್ತಿವೆ. ಆದರೆ, ಜನ ಭಯ, ನಿರ್ಲಕ್ಷ್ಯಂದ ಪರೀಕ್ಷೆ ಮಾಡಿಸಿಕೊಳ್ಳದೇ ಲಕ್ಷಣಗಳನ್ನು ಮುಚ್ಚಿಟ್ಟುಕೊಳ್ಳುತ್ತಿರುವುದು ಕಂಡುಬಂದಿದೆ.

ಕರೊನಾ ಸೋಂಕು ಬಂದವರನ್ನು ಅವಮಾನಿಸುವ ಪರಿಸ್ಥಿತಿ ಇನ್ನೂ ಗ್ರಾಮೀಣ ಭಾಗದಲ್ಲಿದೆ. ಸಾಮಾಜಿಕ ಬಹಿಷ್ಕಾರದ ಭಯ, ತಮಗೇನೂ ಆಗದು ಎಂಬ ನಿರ್ಲಕ್ಷ್ಯಂದ ಹಲವರು ಸೋಂಕಿನ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಮನೆ ಮದ್ದು, ಇನ್ನು ಕೆಲವರು ಸ್ವಯಂ ಔಷಧ ಹಲವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಾತ್ರೆ ತೆಗೆದುಕೊಂಡು ತಮಗೆ ರೋಗ ಬಂದಿಲ್ಲ ಎಂದು ಹೇಳಿಕೊಂಡು ತಿರುಗುವವರೂ ಇದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಆಗಾಗ ಕರೊನಾ ಪರೀಕ್ಷಾ ಶಿಬಿರ ಆಯೋಜಿಸಲಾಗುತ್ತದೆ. ಅದರಲ್ಲಿ ನಾಲ್ಕೆ್ತ್ರದು ಜನ ಮಾತ್ರ ಕೋವಿಡ್ ಪರೀಕ್ಷೆಗೆ ಮುಂದಾಗುತ್ತಿರುವುದು ಕಂಡುಬರುತ್ತಿದೆ. ಕೆಮ್ಮು, ಜ್ವರ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋದಲ್ಲಿ ಕರೊನಾ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿದೆ. ಅದಕ್ಕೆ ಹೆಚ್ಚಿನ ಜನ ಈಗ ಸರ್ಕಾರಿ ಆಸ್ಪತ್ರೆಯ ಮೆಟ್ಟಿಲು ಹತ್ತುವುದನ್ನೇ ಬಿಟ್ಟಿದ್ದಾರೆ.

ಕರೊನಾ ಲಕ್ಷಣ ಇರುವವರು ಸ್ವಯಂ ಆಗಿ ಔಷಧ ಪಡೆಯುವುದು ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳುವ ಬದಲು ನಮ್ಮ ಪಿಎಚ್​ಸಿಗಳಿಗೆ ಬರಬೇಕು. ವಿಳಂಬ ಮಾಡದೇ ಆಸ್ಪತ್ರೆಗೆ ಬಂದಲ್ಲಿ ತೊಂದರೆ ಇಲ್ಲ. ಸೋಂಕಿನ ಲಕ್ಷಣ ಮುಚ್ಚಿಟ್ಟು ಓಡಾಡುವುದರಿಂದ ಇತರರಿಗೂ ತೊಂದರೆಯಾಗುತ್ತದೆ ಎಂಬುದನ್ನು ಅರಿಯಬೇಕು.| ಮುಲ್ಲೈ ಮುಗಿಲನ್ ಎಂ.ಪಿ.ಜಿಲ್ಲಾಧಿಕಾರಿ