ಜಿಲ್ಲೆ

ಜೈವಿಕ ಕೇಂದ್ರದ ಲಾಭ ಪಡೆಯಿರಿ

ಬೀದರ್: ಕಲ್ಯಾಣ ಕರ್ನಾಟಕದ ಏಕೈಕ ಜೈವಿಕ ಕೇಂದ್ರ ನಗರದಲ್ಲಿದೆ. ಪ್ರಕೃತಿಸ್ನೇಹಿ ಜೈವಿಕ ಕೇಂದ್ರ ತಂತ್ರಜ್ಞಾನ ಅಳವಡಿಸಿಕೊಂಡು ತೋಟಗಾರಿಕೆ ಅಭಿವೃದ್ಧಿಗೆ ಪೂರಕವಾದ ಹಲವು ಪರಿಕರ ಮತ್ತು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದೆ. ಜಿಲ್ಲೆಯ ರೈತರು ಸದುಪಯೋಗ ಪಡೆದುಕೊಳ್ಳುವಂತೆ ಸಮಗ್ರ ಜೈವಿಕ ಕೇಂದ್ರದ ಮುಖ್ಯಸ್ಥ ಮಲ್ಲಿಕಾರ್ಜುನ ಎಸ್.ಬಾವಗೆ ಸಲಹೆ ನೀಡಿದರು.
ತೋಟಗಾರಿಕೆಯ ಸಮಗ್ರ ಜೈವಿಕ ಕೇಂದ್ರ, ರಿಲಯನ್ಸ್ ಫೌಂಡೇಷನ್ ಹಾಗೂ ಔಟ್ ರೀಚ್ ಸಂಸ್ಥೆ ಸಹಯೋಗದಡಿ ಹಳ್ಳದಕೇರಿ ಕಚೇರಿಯಲ್ಲಿ ಏರ್ಪಡಿಸಿದ್ದ ರೈತರಿಗೆ ಸಮಗ್ರ ಜೈವಿಕ ಕೇಂದ್ರದಿಂದ ಸಿಗುವ ಸೌಲಭ್ಯಗಳ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರದಲ್ಲಿ ನಾಲ್ಕು ಪ್ರಯೋಗಾಲಯಗಳಿವೆ. ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಉತ್ತಮ ರೀತಿಯಲ್ಲಿ ಬೆಳೆಯಬಹುದು. ಜೈವಿಕ ಗೊಬ್ಬರ ಮತ್ತು ಪರಿಕರಗಳು, ಅಂಗಾಂಶ ಬಾಳೆ ಸಸಿ, ಅಣಬೆ ಬೀಜವನ್ನು ಇಲಾಖೆ ನಿಗದಿಪಡಿಸಿರುವ ದರ ಪಾವತಿಸಿ ಪಡೆಯಬಹುದು ಎಂದರು.
ಸಹಾಯಕ ತೋಟಗಾರಿಕೆ ಅಧಿಕಾರಿ ಕಲ್ಪಕಲಾ ಅವರು ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಜೈವಿಕ ಗೊಬ್ಬರ ಬಳಕೆ, ಅದರಿಂದಾಗುವ ಲಾಭ, ತೋಟಗಾರಿಕೆ ಅಧಿಕಾರಿ ರೇಣುಕಾ ಅಂಗಾಂಶ ಕೃಷಿ ಬಾಳೆ ಮಹತ್ವ ಮತ್ತು ಬೇಸಾಯ, ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ ಅವರು ಅಣಬೆ ಬೆಳೆ ಮಹತ್ವ, ಉಪಯೋಗ ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಾಣೇಶಕುಮಾರ ಅವರು ಬೇಸಾಯ ಕುರಿತು ಉಪನ್ಯಾಸ ಮಂಡಿಸಿದರು.
ರಿಲಯನ್ಸ್ ಫೌಂಡೇಷನ್ ಜಿಲ್ಲಾ ಸಂಯೋಜಕ ಮಹೇಶ, ಸಹಾಯಕ ಬಾಲಾಜಿ ಮೇತ್ರೆ, ತೋಟಗಾರಿಕೆ ಸಹಾಯಕಿ ಗಂಗಮ್ಮ, ಎಫ್.ಡಿಎ ಜಗನ್ನಾಥ ಇದ್ದರು.