ಬೀದರ್: ವಿಚಾರಣಾಧಿನ ಕೈದಿಗೆ ಆಸ್ಪತ್ರೆಗೆ ಸ್ಥಳಾಂತರಿಸುವ ಸಂಬಂಧ 90 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಲ್ಲಿಯ ಜಿಲ್ಲಾ ಕಾರಾಗೃಹದ ಜೈಲರ್ ಬಸವರಾಜ ಹೊಸಗೌಡ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಬಲೆಗೆ ಬಿದ್ದು, ಜೈಲುಪಾಲಾಗಿದ್ದಾರೆ.
ಕಾರಾಗೃಹದಲ್ಲಿರುವ ಕೊಲೆ ಆರೋಪ ಹೊತ್ತಿದ್ದ ವಿಚಾರಾಣಾಧೀನ ಕೈದಿ ಅಲಿಯಂಬರ್ ಗ್ರಾಮದ ರೇವಣ್ಣಸಿದ್ದಯ್ಯಾ ಸ್ವಾಮಿ ಎಂಬುವರಿಗೆ ಚಿಕಿತ್ಸೆ ಸಂಬಂಧ ಆಸ್ಪತ್ರೆಗೆ ಕಳಿಸುವುದಕ್ಕಾಗಿ ಜೈಲರ್ ಬಸವರಾಜ ಅವರು 90 ಸಾವಿರ ರೂ. ಲಂಚ ಕೇಳಿದ್ದರು. ಈ ಸಂಬಂಧ ರೇವಣಸಿದ್ದಯ್ಯಾ ಅವರ ಪುತ್ರ ಆದರ್ಶ ಎಸಿಬಿಗೆ ದೂರು ನೀಡಿದ್ದರು. ಸೋಮವಾರ ರಾತ್ರಿ ಕಾರಾಗೃಹದ ಹತ್ತಿರ ಜೈಲರ್ ಈ ಮೊತ್ತ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಎಸ್ಪಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಹಣಮಂತರಾಯ ಅವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಶರಣಬಸಪ್ಪ ಕೋಡ್ಲಾ, ವೆಂಕಟೇಶ ಯಡಹಳ್ಳಿ ಅವರು ದಾಳಿ ನಡೆಸಿದ್ದರು. ಜೈಲರ್ ಬಸವರಾಜ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಸವರಾಜ ಮೂಲತಃ ಕಲಬುರಗಿ ಜಿಲ್ಲೆಯವರು.