ಜಿಲ್ಲೆ

ಜೈಪುರ ಮಾದರಿಯಲ್ಲಿ ಜಾನಪದ ಲೋಕ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಹೇಳಿಕೆ

ರಾಮನಗರ : ಜಾನಪದ ಲೋಕವನ್ನು ಜೈಪುರ ಮಾದರಿಯಲ್ಲಿ ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸುವ ಜತೆಗೆ ಜಾನಪದ ಕಲಾವಿದರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಹೇಳಿದರು.

ನಗರದ ಹೊರವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್, ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಪ್ರವಾಸಿ ಜಾನಪದ ಲೋಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ರಾಜಸ್ಥಾನದ ಜೈಪುರದಲ್ಲಿ ಸಾಂಸ್ಕೃತಿಕ ಕೇಂದ್ರವಿದೆ. ಅಲ್ಲಿ ಪ್ರತಿನಿತ್ಯ 50 ರಿಂದ 60 ಜಾನಪದ ಕಲಾ ತಂಡಗಳು ಪ್ರದರ್ಶನ ನೀಡುತ್ತವೆ. ಅಲ್ಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದೇ ಮಾದರಿಯಲ್ಲಿ ಜಾನಪದ ಲೋಕವನ್ನು ಸಾಂಸ್ಕೃತಿಕ ಕೇಂದ್ರವಾಗಿ ಪರಿವರ್ತಿಸಿದರೆ ವೀಕೆಂಡ್‌ನಲ್ಲಿ ಮೈಸೂರು-ಬೆಂಗಳೂರಿಗೆ ತೆರಳುವ ಜನರು ಕಲಾ ಸೊಬಗನ್ನು ಆಸ್ವಾದಿಸುತ್ತಾರೆ. ಈ ನಿಟ್ಟಿನಲ್ಲಿ ಕ್ರಮ ವಹಿಸಿದರೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಡಾ. ಹಂಪ ನಾಗರಾಜಯ್ಯ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಜಾನಪದ ಕಥೆಗಳಿಗೆ ಕಥಾ ಪ್ರಕಾರ ಇದೆ ಎಂಬುದನ್ನು ಗುರುತಿಸಿದವನು ಪ್ರಾಕೃತದ ಐದನೇ ಶತಮಾನದ ಸಂಗದಾಸ ಗಣಿ. ಜಾನಪದ ಕಥಾ ಪ್ರಕಾರ ಗುರುತಿಸಿ ಪ್ರಾಚೀನವಾಗಿ ಸ್ಥಾನ ನೀಡಿದ್ದನು. ಪ್ರಾಕೃತ ಸಂಸ್ಕೃತದಲ್ಲಿ ಜಾನಪದ ಸಾಹಿತ್ಯವನ್ನು ಶಿಷ್ಟ ಸಾಹಿತ್ಯಕ್ಕೆ ದಾಟಿಸುವ ಪ್ರಕ್ರಿಯೆಯಲ್ಲಿ ವಸುದೇವ ಹಿಂಡಿ ಮಾತನಾಡಿದ್ದಾರೆ. ಅಲ್ಲದೆ, ಜನಪದರು ಹೇಳುವ ಕಥೆಗಳ ಪ್ರಕಾರಗಳನ್ನು ವಿಂಗಡಿಸಿ ಹೇಳಿರುವುದರ ಉಲ್ಲೇಖವಿದೆ ಎಂದು ಹೇಳಿದರು.ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಎಂ.ಎನ್.ರುದ್ರಪ್ಪ, ಆಡಳಿತಾಧಿಕಾರಿ ಕುರುವ ಬಸವರಾಜು ಉಪಸ್ಥಿತರಿದ್ದರು.

ಕಲೋತ್ಸವದಲ್ಲಿ ಇಂದು : ಫೆ.18 ರಂದು ಸಂಜೆ 5.30ಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಚಿವ ಸಿ.ಟಿ. ರವಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕಿ ಅನಿತಾ ಕುಮಾರಸ್ವಾಮಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ, ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ಎನ್.ರಮೇಶ್ ಭಾಗವಹಿಸಲಿದ್ದಾರೆ.