ಚಿತ್ರದುರ್ಗ: ಗಣೇಶ ಚತುರ್ಥಿಯಾದ ಒಂದು ವಾರದ ಬಳಿಕ ಜೈನ್ ಸಮುದಾಯದಿಂದ ವರ್ಷಕ್ಕೊಮ್ಮೆ ಆಚರಿಸುವ ಕ್ಷಮಾಪಣಾ ದಿನವನ್ನು ಭಾನುವಾರ ಗುರು-ಹಿರಿಯರಿಗೆ ನಮಸ್ಕರಿಸುವ ಮೂಲಕ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಮಹಾವೀರರ, ಗೋಡಿ ಪಾರ್ಶ್ವನಾಥರ ವಿಗ್ರಹ ಹಾಗೂ ಭಾವಚಿತ್ರವನ್ನು ಬೆಳ್ಳಿ ವರ್ಣದ ಸುಂದರ ಸಾರೋಟಿನಲ್ಲಿ ಇರಿಸಲಾಗಿತ್ತು. ಸುತ್ತಲು ವಿವಿಧ ಪುಷ್ಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಕ್ಷಮಾಪಣಾ ದಿನದ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಯಿತು. ಅಲ್ಲದೆ, ನೋಡುಗರ ಕಣ್ಮನ ಸೆಳೆಯಿತು.
ಛತ್ರ, ಚಾಮರ, ಡೊಳ್ಳು ಕುಣಿತ, ತಮಟೆ ವಾದ್ಯ, ಜನಪದ ವಾದ್ಯ, ಬ್ರಾಸ್‌ಬ್ಯಾಂಡ್, ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಮೆರವಣಿಗೆಯಲ್ಲಿ ಪುರುಷರು, ಮಹಿಳೆಯರು ಒಳಗೊಂಡು ಹಿರಿಯರು, ಕಿರಿಯರೆನ್ನದೆ ಜೈನ ಸಮುದಾಯದ ಬಹುತೇಕರು ಸಂತಸದಿಂದ ಪಾಲ್ಗೊಂಡು ಭಕ್ತಿ, ಭಾವ ಮೆರೆದರು.
ಕುಣಿದು ಸಂಭ್ರಮಿಸಿದ ಯುವಕರು: ಖುರ್ತಾ, ದೋತಿ ಸೇರಿ ಸಾಂಪ್ರದಾಯಿಕ ವಿವಿಧ ಉಡುಗೆ ತೊಡುಗೆಗಳಿಂದ ಜೈನ ಸಮುದಾಯದವರು ಗಮನ ಸೆಳೆದರು. ಅಲ್ಲದೆ, ಯುವಕರು ಕುಣಿದು ಸಂಭ್ರಮಿಸಿದರು.
ಪಾರ್ಶ್ವನಾಥ ವಿದ್ಯಾಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಂದಿ ಜೈನ ಸಮುದಾಯದವರು ಮೆರವಣಿಗೆಯಲ್ಲಿ ಗಮನ ಸೆಳೆದರು. ಮಾರ್ಗದುದ್ದಕ್ಕೂ ಅಲ್ಲಲ್ಲಿ ಸಿಹಿ ಹಂಚಿದರು.
ಇಲ್ಲಿನ ಜೈನ ದೇಗುಲದಿಂದ ಆರಂಭವಾದ ಮೆರವಣಿಗೆ ಲಕ್ಷ್ಮಿಬಜಾರ್, ಗಾಂಧಿ, ಎಸ್‌ಬಿಐ, ಅಂಬೇಡ್ಕರ್, ಮದಕರಿನಾಯಕ ವೃತ್ತ, ಬಿ.ಡಿ.ರಸ್ತೆ, ಚಿಕ್ಕಪೇಟೆ, ಆನೆಬಾಗಿಲು ಮಾರ್ಗಗಳಲ್ಲಿ ಸಂಚರಿಸಿದ ನಂತರ ಪುನಃ ದೇಗುಲ ತಲುಪಿತು.