ಚಾಮರಾಜನಗರ: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತ ಸಮುದಾಯಕ್ಕೆ ಅಪಮಾನವೆಸಗಿದ್ದಾರೆ ಎನ್ನುವ ಆರೋಪ ಹೊತ್ತಿರುವ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ವಿರುದ್ಧ ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಪಿ.ಸೋಮಣ್ಣ ದೂರು ನೀಡಿದ್ದು, ವಿವಿಯ ವಿದ್ಯಾರ್ಥಿಗಳ ಗುಂಪು ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕಿರುನಾಟಕ ಪ್ರದರ್ಶನ ಮಾಡಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಬಗ್ಗೆ ಅವಾಚ್ಯ ಮತ್ತು ಜಾತಿ ದ್ವೇಷದಿಂದ ಅವಮಾನ ಮಾಡಿದ್ದಾರೆ. ಇದು ಉದ್ದೇಶ ಪೂರ್ವಕವಾಗಿ ನಡೆದಿರುವ ಕೃತ್ಯವಾಗಿದ್ದು, ವಿವಿಯ ಮಾನ್ಯತೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಜೈನ್ ವಿವಿಯಲ್ಲಿ ಜಾತಿವಾದ, ಕೀಳು ಭಾಷೆ ಬಳಕೆ ಮಾಡುವುದು, ಗೇಲಿ ಮಾಡಿ ಜಾತಿ ನಿಂದನೆ ಮಾಡುವುದನ್ನು ಪ್ರೋತ್ಸಾಹಿಸುತ್ತಿದೆ. ಆಡಳಿತ ಮಂಡಳಿ ವಿರುದ್ಧ ತಕ್ಷಣ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಜಾತಿ ಅಸಮಾತೆಗೆ ಕಾರಣವಾಗಲಿದೆ. ಈ ಕುರಿತು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಗರಸಭೆ ಸದಸ್ಯ ಎಸ್.ಮಹದೇವ, ಕೆ.ನಾಗರಾಜು, ನಾಗಶಯನ, ಸಂಘಸೇನಾ, ಕೃಷ್ಣರಾಜು, ಕೊತ್ತಲವಾಡಿ ನಾಗರಾಜು, ರಮೇಶ್, ಗುಂಡಣ್ಣ, ಕೆಂಪರಾಜು, ವೀರಭದ್ರಸ್ವಾಮಿ, ಆಲೂರು ನಾಗರಾಜು, ಹೆಬ್ಬಸೂರು ರಂಗಸ್ವಾಮಿ, ಉಮೇಶ್, ಶಿವಮಲ್ಲು ಮತ್ತು ಮುಖಂಡರು ಭಾಗವಹಿಸಿದ್ದರು.