ಜಿಲ್ಲೆ

ಜೈನ್ ಯೂನಿವರ್ಸಿಟಿ ವಿರುದ್ಧ ಪ್ರತಿಭಟನೆ

ಮೈಸೂರು: ಜೈನ್ ಯೂನಿವರ್ಸಿಟಿ ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟ ಮಾನಸಗಂಗೋತ್ರಿಯ ಕುವೆಂಪು ಪುತ್ಥಳಿ ಬಳಿ ಸೋಮವಾರ ಪ್ರತಿಭಟನೆ ನಡೆಸಿತು.


ಜೈನ್ ಯುನಿವರ್ಸಿಟಿಯ ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ಕೊಡುಗೆ ದೇಶಕ್ಕೆ ಅಪಾರವಾದದ್ದು, ಅವರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿರುವುದು ಎಷ್ಟರ ಮಟ್ಟಿಗೆ ಸರಿ? ಇಂತಹವರಿಗೆ ಕಾನೂನು ಅಡಿಯಲ್ಲಿ ಶಿಕ್ಷಯಾಗಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ವಿಚಾರವಾಗಿ ದಲಿತರ ಬಗ್ಗೆ ಮತ್ತು ಅಸ್ಪೃಶ್ಯತೆಯ ಕುರಿತಾಗಿ ಮಾತನಾಡಿ ದಲಿತರನ್ನು ಅವಮಾನಿಸಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಕೂಡಲೇ ಬಂಧಿಸಬೇಕು. ಸಂವಿಧಾನ ವಿರೋಧಿ ಜೈನ್ ವಿಶ್ವವಿದ್ಯಾನಿಲಯವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಕೋಮುವಾದದ ಮನಸ್ಥಿತಿ ಇರುವಂತಹ ಕೆಲವು ವ್ಯಕ್ತಿಗಳಿಂದ ಸಮಾಜಕ್ಕೆ ಏನನ್ನು ನಿರೀಕ್ಷಿಸಲು ಸಾಧ್ಯ? ಇದರಲ್ಲಿ ಯಾರ ಕೈವಾಡವಿದೆ ಎಂಬುದನ್ನು ತಿಳಿಯಬೇಕಿದೆ. ಇವರ ಮೇಲೆ ಪ್ರಕರಣ ದಾಖಲು ಮಾಡಿ ಕಠಿಣ ಶಿಕ್ಷೆ ನೀಡಬೇಕು. ಸರ್ಕಾರ ಇವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಂಎಲ್‌ಸಿ ಎಚ್.ವಿಶ್ವನಾಥ್ ಭಾಗವಹಿಸಿ ಬೆಂಬಲ ಸೂಚಿಸಿದರು. ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ ಶಿವಣ್ಣ ಉಪಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ಗೌರವ ಅಧ್ಯಕ್ಷ ಸೋಸ್ಲೆ ಮಹೇಶ್, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪರಂ ಜ್ಯೋತಿ, ಕಾತಿರ್ಕ್, ಆನಂದ, ವರಲಹಳ್ಳಿ ಶಂಕರ್, ರಂಗಸ್ವಾಮಿ, ಜಗದೀಶ್, ಪ್ರವೀಣ, ನಿಂಗರಾಜ ಇತರರು ಇದ್ದರು.