ಐನಾಪುರ: ಪಟ್ಟಣದಲ್ಲಿ ಜೂ.8ರಂದು ಜರುಗಲಿರುವ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಬೃಹತ್ ಜೈನ ಸಮಾವೇಶಕ್ಕೆ ಈಗಾಗಲೇ ಐನಾಪುರ ಸಿದ್ಧಗೊಂಡಿದ್ದು, ಅಂದಾಜು 1 ಲಕ್ಷ ಜನ ಸೇರಲಿದ್ದಾರೆ ಎಂದು ಅಂದಾಜಿಸಲಾಗಿದೆ.
ರಾಜ್ಯಪಾಲ ಥಾವರಚಂದ ಗೆಹಲೋತ್ ಸೇರಿ ಸಚಿವರು, ಹಾಲಿ, ಮಾಜಿ ಶಾಸಕರು, ಸಂಸದರು ಹಾಗೂ ಗಣ್ಯಮಾನ್ಯರು ಆಗಮಿಸಲಿದ್ದಾರೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಅಚ್ಚುಕಟ್ಟಾದ ವ್ಯವಸ್ಥೆ: ಪಟ್ಟಣದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಹತ್ತಿರವಿರುವ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆ ಆವರಣದಲ್ಲಿ 15 ಎಕರೆ ಪ್ರದೇಶದಲ್ಲಿ ಬೃಹತ್ ಹವಾನಿಯಂತ್ರಿತ ಪೆಂಡಾಲ್ ಹಾಗೂ ವೇದಿಕೆ ಸಜ್ಜುಗೊಳಿಸಲಾಗಿದೆ. ಪಟ್ಟಣದ ಪ್ರಮುಖ ಸರ್ಕಲ್ ಹಾಗೂ ರಸ್ತೆ ಸೇರಿ ವಿವಿಧೆಡೆ ಜೈನ ಸಮಾವೇಶದ ಬ್ಯಾನರ್‌ಗಳು, ಧ್ವಜ, ಭಿತ್ತಿಪತ್ರಗಳು, ರಾರಾಜಿಸುತ್ತಿವೆ.
ಸಮಾವೇಶಕ್ಕೆ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕ ಸೇರಿ ನೆರೆಯ ರಾಜ್ಯದಿದಂದಲೂ ಸಮಾವೇಶಕ್ಕೆ ಸಾವಿರಾರು ಬಸ್ಸುಗಳು, ವಿವಿಧ ವಾಹನಗಳು ಬರುತ್ತಿದ್ದು ನಿಲುಗಡೆಗಾಗಿ ಸಿದ್ಧೇಶ್ವರ ದೇವಸ್ಥಾನದ ಹತ್ತಿರ ದೊಡ್ಡ ಪ್ರಾಂಗಣದಲ್ಲಿ ವ್ಯವಸ್ಥೆ ಕಲ್ಲಿಸಲಾಗಿದೆ. ಬೆಳಗಾವಿ, ವಿಜಯಪುರ, ಧಾರವಾಡ, ಬಾಗಲಕೋಟೆ, ಶಿವಮೊಗ್ಗ ಹಾಗೂ ವಹಾರಾಷ್ಟ್ರದಿಂದ ಅನೇಕ ಜನ ಆಗಮಿಸುವ ನಿರೀಕ್ಷೆಯಿದೆ. ಐನಾಪುರ ಸುತ್ತಮುತ್ತಲಿನ ಗ್ರಾಮಗಳ ಜೈನ ಸಮುದಾಯದ ಜನರು ಸಹಕಾರ ನೀಡುತ್ತಿದ್ದಾರೆ.