ಜಿಲ್ಲೆ

ಜೈನ ಸಮಾಜದಿಂದ ಮೌನ ಪ್ರತಿಭಟನೆ

ಮೈಸೂರು: ಬೆಳಗಾವಿ ಜಿಲ್ಲೆಯ ಹಿರೇಕೋಡು ಗ್ರಾಮದಲ್ಲಿ ಜೈನ ದಿಗಂಬರ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಖಂಡಿಸಿ ಜು.12ರಂದು ಬೆಳಗ್ಗೆ 10ಕ್ಕೆ ನಗರದಲ್ಲಿ ಮೌನ ಪ್ರತಿಭಟನೆ ನಡೆಸಲು ದಿಗಂಬರ ಜೈನ ಸಮಾಜ ತೀರ್ಮಾನಿಸಿದೆ.

ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ನೂತನ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಲಾಗುವುದು. ಹತ್ಯೆ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಕೋರಿ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ದಿಗಂಬರ ಜೈನ ಸಮಾಜದ ಅಧ್ಯಕ್ಷ ಸುನಿಲ್‌ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜೈನ ಸಮುದಾಯದ ಎಲ್ಲ ಪಂಗಡಗಳ ಸುಮಾರು 2 ಸಾವಿರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜಕ್ಕೆ ಜೈನರ ಕೊಡುಗೆ ಅಪಾರ. ಇದು ಅಹಿಂಸೆ ಸಾರಿದ ಧರ್ಮವೂ ಆಗಿದೆ. ಆದರೂ ಸರ್ವಸಂಗ ಪರಿತ್ಯಾಗಿಗಳಾದ ಮುನಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಹೀಗಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಸಮುದಾಯದ ಮುಖಂಡರಾದ ವಿನೋದ್ ಜೈನ್, ಲತಾ ಸುದರ್ಶನ್, ಸುರೇಶ್‌ಕುಮಾರ್ ಜೈನ್, ಯುವರಾಜ್ ಭಂಡಾರಿ ಇತರರಿದ್ದರು.