ಜಿಲ್ಲೆ

ಜೈನ ಸಮಾಜದಿಂದ ಪ್ರತಿಭಟನೆ

ಮೈಸೂರು: ಜಾರ್ಖಂಡ್‌ನ ಗಿರಿಡಿ ಜಿಲ್ಲೆಯ ಜೈನರ ಪವಿತ್ರ ಪ್ರಾಚೀ ತೀರ್ಥಂಕರರ ಮೋಕ್ಷ ತಾಣವಾದ ಶ್ರೀ ಸಮ್ಮೇದ ಶಿಖರ್ಜಿ ಕ್ಷೇತ್ರವನ್ನು ಉಳಿಸಬೇಕು ಎಂದು ಆಗ್ರಹಿಸಿ ಶ್ರೀದಿಗಂಬರ ಜೈನ ಸಮಾಜದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಅಶೋಕ ರಸ್ತೆ, ಇರ್ವಿನ್ ರಸ್ತೆ, ಜೆಎಲ್‌ಬಿ ರಸ್ತೆ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಮಾಜಕ್ಕೆ ಜೈನರ ಕೊಡುಗೆ ಅಪಾರ. ಅನಾದಿ ಕಾಲದಿಂದಲೂ ಅಹಿಂಸಾ ತತ್ವ ಬೋಧಿಸುತ್ತಿದ್ದಾರೆ. ಈ ತತ್ವವನ್ನು ಸಾರಿದ 24 ತೀರ್ಥಂಕರರಲ್ಲಿ 20 ತೀರ್ಥಂಕರರು ತಮ್ಮ ಅಪಾರ ಮುನಿಗಳ ಜತೆಗೆ ಮೋಕ್ಷ ಪಡೆದಂತಹ ಅತ್ಯಂತ ಪವಿತ್ರ, ಪ್ರಾಚೀನ ಸ್ಥಳ ಶ್ರೀ ಸಮ್ಮೇದ ಶಿಖರ್ಜಿ. ಆದರೆ, ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲು ಅಲ್ಲಿಯ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಿದೆ. ಇದರಿಂದ ಮೋಜು, ಮಸ್ತಿಗೆ ಅವಕಾಶ ದೊರೆಯುವುದರಿಂದ ಈ ಕ್ಷೇತ್ರ ಅಪವಿತ್ರವಾಗಲಿದೆ. ಆದ್ದರಿಂದ ಜಾರ್ಖಂಡ್ ಸರ್ಕಾರವು ಈ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಸಮಾಜದ ಮುಖಂಡರಾದ ಎಸ್.ಡಿ.ಮಹೇಶ್‌ಪ್ರಸಾದ್, ಬಿ.ಭರತ್‌ರಾಜ್, ಬಿ.ಜ್ವಾಲೇಂದ್ರಪ್ರಸಾದ್, ಎಂ.ಆರ್. ಸುನೀಲ್‌ಕುಮಾರ್, ಪಿ.ಎಸ್.ಲಕ್ಷ್ಮೀಶ್‌ಬಾಬು, ಎ.ಎನ್.ಧರಣೇಂದ್ರನ್, ಕೆ.ಚಂದ್ರಶೇಖರ್ ಆರಿಗ, ಅಶೋಕ್ ಪಾಟೀಲ್ ಇನ್ನಿತರರು ಇದ್ದರು.