ಜಿಲ್ಲೆ

ಜೈನ ಸನ್ಯಾಸ ದೀಕ್ಷಾರ್ಥಿಗಳ ಮೆರವಣಿಗೆ

ಹುಬ್ಬಳ್ಳಿ: ಜೈನ ಸನ್ಯಾಸಿಗಳಾಗಿ ದೀಕ್ಷೆ ಪಡೆಯುತ್ತಿರುವ ಹತ್ತು ಜನರ ಮೆರವಣಿಗೆ ಭಕ್ತಿಪೂರ್ವಕವಾಗಿ ಭಾನುವಾರ ನಗರದಲ್ಲಿ ಜರುಗಿತು.

ಇಲ್ಲಿನ ಕಂಚಗಾರ ಗಲ್ಲಿಯ ಮುರುಧರ ಶಾಂತಿನಾಥ ಭವನದಿಂದ ಬೆಳಗ್ಗೆ 10ರ ಸುಮಾರಿಗೆ ಶುರುವಾದ ಮೆರವಣಿಗೆಯು ದುರ್ಗದಬೈಲ್, ಕೊಪ್ಪಿಕರ ರಸ್ತೆ, ಪಿಂಟು ರಸ್ತೆ, ಕ್ಲಬ್ ರಸ್ತೆ ಮೂಲಕ ಸಾಗಿ ಕೇಶ್ವಾಪುರದ ಅರಿಹಂತ ನಗರದ ದೀಕ್ಷಾ ಮಂಟಪವನ್ನು ಮಧ್ಯಾಹ್ನ ತಲುಪಿತು. ಕೊನೆಯದಾಗಿ ಆಕರ್ಷಕ ಉಡುಪು ಧರಿಸಿ ಆಗಮಿಸಿದ್ದ ದೀಕ್ಷಾರ್ಥಿಗಳನ್ನು ಅಲಂಕರಿಸಲಾದ ಟ್ರ್ಯಾಕ್ಟರ್​ಗಳ ಮೂಲಕ ಮೆರವಣಿ ಮಾಡಲಾಯಿತು. ಪ್ರತಿ ದೀಕ್ಷಾರ್ಥಿ ಮತ್ತವರ ಕುಟುಂಬದವರನ್ನು ಪ್ರತ್ಯೇಕ ಟ್ರ್ಯಾಕ್ಟರ್​ಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯ ಮುಂಚೂಣಿಯಲ್ಲಿ ಆಚಾರ್ಯ ಶ್ರೀ ಅಭಯಶೇಖರ ಸುರೀಶ್ವರಜಿ, ಆಚಾರ್ಯ ಶ್ರೀ ಅಜಿತಶೇಖರ ಸುರೀಶ್ವರಜಿ, ಆಚಾರ್ಯ ಶ್ರೀ ವಿಮಲಬೋಧಿ ಸುರೀಶ್ವರಜಿ ಇದ್ದರು. ಇವರೊಟ್ಟಿಗೆ 25 ಮುನಿಗಳು, 23 ಸಾಧಿ್ವಳೂ ಭಾಗವಹಿಸಿದ್ದರು. ದಾರಿಯುದ್ದಕ್ಕೂ ಸಾರ್ವಜನಿಕರಿಗೆ ಲಡ್ಡು ವಿತರಿಸಲಾಯಿತು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜೈನ ಸಮಾಜದವರು ಸೇರಿದ್ದರು. ಶ್ರೀ ಜೈನ ಮುರುಧರ ಸಂಘದ ಅಧ್ಯಕ್ಷ ಫುಖರಾಜ ಸಂಘಿ, ಶ್ರೀ ಜೈನ ರಾಜಸ್ಥಾನಿ ವಿದ್ಯಾಪ್ರಚಾರಕ ಮಂಡಲದ ಅಧ್ಯಕ್ಷ ಭವರಲಾಲ್ ಜೈನ, ಶ್ರೀ ಕೇಶ್ವಾಪುರ ಜೈನ ಸಂಘದ ಅಧ್ಯಕ್ಷ ಕಾಂತಿಲಾಲ ವಕ್ಕೇತ್ರ, ಮನ್ಸಾಲಾಲ ಧುಮಾವತ್, ಲಲಿತ್ ಜೈನ, ಮದನಲಾಲ ಜೈನ, ದಿನೇಶ ಸಂಘಿ, ಅಮೃತಲಾಲ ಜೈನ, ಗಿರೀಶ ಕೊಠಾರಿ, ಸುರೇಶ ಜೈನ, ರಮೇಶ ಕೊಠಾರಿ,

ಸುಕನರಾಜ ಬಾಫಣಾ, ಇತರರು ಇದ್ದರು.

ಅರಿಹಂತ ನಗರದಲ್ಲಿ ದೀಕ್ಷೆ ಸಮಾರಂಭ ಇಂದು: ಮೋಕ್ಷಾರೂಚಿಭಾಯ್ ಮೋಹನಲಾಲ್ ಜವೇರಿ, ವಿನೀತ್ ಅಭಯಜಿ ಲೋಬಗೋತ್ರ ಚೌಹಾಣ, ಅಭಿಷೇಕ ವಿಜಯರಾಜಜಿ ಕಾಂಕರಿಯಾ, ಹರ್ಷ ಮುಕೇಶಜಿ ಕೊಠಾರಿ, ಚೇತನ ಲಲಿತಜಿ ಕೊಠಾರಿ, ವಿನೀತಾ ಸುರೇಶಕುಮಾರಜಿ ಧಾರವಾಲ, ರೇಖಾ ಪಾರಸಮಲ್​ಜಿ ಢೇಲಡಿಯಾ ಮುಥಾ, ಕರಿಶ್ಮಾ ರೋಹಿತಕುಮಾರಜಿ ಬೋಹರಾ, ಸಿಮರನ್ ಅಭಯಕುಮಾರಜಿ ಮಾಂಡೋತಜೈನ, ಅದಿತಿ ಜಯಂತಿಲಾಲ್​ಜಿ ಬಂಧಾಮುಥಾ ಅವರು ಜೈನ ಸನ್ಯಾಸ ದೀಕ್ಷೆ ಸ್ವೀಕರಿಸುವರು. ಅರಿಹಂತ ನಗರದ ಪ್ರೇಮ ಯಶೋದೇವ ಭವನಭಾನು ಸಂಯಮ ಉದ್ಯಾನದಲ್ಲಿ ಫೆ. 22ರಂದು ಕಾರ್ಯಕ್ರಮ ನೆರವೇರಲಿದೆ. 23ರಂದು ನೂತನ ಮುನಿಗಳೊಂದಿಗೆ ಆಚಾರ್ಯ ಭಗವಂತರ ಅವರು ದೀಕ್ಷಾರ್ಥಿ ಪರಿವಾರದವರ ಮನೆಗೆ ಪಾದಯಾತ್ರೆ ಕೈಗೊಳ್ಳುವರು.

ಗಮನ ಸೆಳೆದ ಭಟಿಂಡಾ ಬ್ಯಾಂಡ್ : ಮೆರವಣಿಗೆ ಉದ್ದಕ್ಕೂ ಪಂಜಾಬ್​ನ ಭಟಿಂಡಾ ಬ್ಯಾಂಡ್, ರಾಜಸ್ಥಾನದ ಬರ್ಲೂಟ್ ಬ್ಯಾಂಡ್, ಶಹನಾಯಿ ಬಹಳಷ್ಟು ಗಮನ ಸೆಳೆದವು. ಬಹಳಷ್ಟು ಜನರು ಪ್ರತಿ ಹಾಡಿಗೂ ಹೆಜ್ಜೆ ಹಾಕಿ ಸಂಭ್ರಮಿಸಿದರು.