ಐನಾಪುರ: ರಾಷ್ಟ್ರಸಂತ ಗುಣಧರನಂದಿ ಮಹಾರಾಜರ ಸಾನ್ನಿಧ್ಯದಲ್ಲಿ ಜೂ.೮ರಂದು ಪಟ್ಟಣದಲ್ಲಿ ಸಮಸ್ತ ಜೈನ್ ಸಮುದಾಯದ ಬೃಹತ್ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಜೈನ್ ಸಮುದಾಯದ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಹಾಗೂ ರೈತ ಮುಖಂಡ ದಾದಾಗೌಡ ಪಾಟೀಲ ತಿಳಿಸಿದರು.
ಪಟ್ಟಣದ ಆದಿನಾಥ ದಿಗಂಬರ ಜೈನ ಬಸದಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೃಹತ್ ಸಮ್ಮೇಳನ ನಿಮಿತ್ತ ಜೂ. ೬ಮತ್ತು ೭ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.೮ರಂದು ಜರುಗಲಿರುವ ಸಮ್ಮೇಳನಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋತ್, ಜೈನ ಸಮುದಾಯದ ೨೦ಕ್ಕೂ ಅಧಿಕ ಭಟ್ಟಾರಕ ಸ್ವಾಮೀಜಿ ಹಾಗೂ ಅಸಂಖ್ಯಾತ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಜೈನ್ ಸಮುದಾಯ ಸಾಧುಗಳ ಮೇಲೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಆಗುತ್ತಿರುವ ಅನ್ಯಾಯ ಸರಿಪಡಿಸಲು ಜೈನರು ಎಚ್ಚರವಾಗಿರಬೇಕಾಗಿದೆ. ಸಮಾಜಕ್ಕೆ ಸಿಗಬೇಕಾದ ನ್ಯಾಯ ಕೇಳಲು ಯಾವುದೇ ಪಕ್ಷಪಾತವಿಲ್ಲದೇ ನಮ್ಮ ಹಕ್ಕನ್ನು ಪ್ರತಿಪಾದಿಸುವ ಸಲುವಾಗಿ ಮುನಿ ಮಹಾರಾಜರ ಸಾನ್ನಿಧ್ಯ ಹಾಗೂ ಎಲ್ಲ ಭಟ್ಟಾರಕರ ನೇತೃತ್ವದಲ್ಲಿ ಬೃಹತ್ ಜೈನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಂಗಳವಾರ ಸಂಜೆ ರಾಷ್ಟ್ರಸಂತ ಗುಣಧರನಂದಿ ಮುನಿ ಮಹಾರಾಜರು ಪುರಪ್ರವೇಶ ಮಾಡಿದರು.
ಸುನೀಲಗೌಡ ಪಾಟೀಲ, ದಾದಾ ಪಾಟೀಲ, ಮಹೇಂದ್ರ ಉಫಾಧ್ಯೆ, ಗುಣಧರ ಬಣಜವಾಡ, ಪ್ರದೀಪ ಲಿಂಬಿಕಾಯಿ, ಸಂತೋಷ ಪಾಟೀಲ, ಶಾಂತಿನಾಥ ಸವದತ್ತಿ, ಆದಿನಾಥ ಉಪಾಧ್ಯೆ, ಸಮೀರ್ ಕುಚನೂರೆ, ಸುನೀಲ ಬಾಲೋಜಿ, ಪ್ರೇಮ ಉಗಾರೆ, ಶಾಂತಿನಾಥ ಮಾನಗಾಂವೆ, ಸಂಜು ಕುನಾಳೆ, ರಾವಸಾಹೇಬ ಪಾಟೀಲ ಇತರರಿದ್ದರು.