ಜಿಲ್ಲೆ

ಜೈನ ತತ್ವಗಳಿಂದ ನೆಮ್ಮದಿ ಸಾಧ್ಯ

ಹುಬ್ಬಳ್ಳಿ: ಸನಾತನ ಕಾಲದಿಂದಲೂ ಅಹಿಂಸೆ, ಶಾಂತಿ ಬೋಧಿಸುತ್ತ ಬಂದಿರುವ ಜೈನ ಧರ್ಮದ ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಎಲ್ಲೆಡೆ ನೆಮ್ಮದಿ ನೆಲೆಸುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದಕ್ಷಿಣ ಭಾರತ ಜೈನ ಸಭಾ, ಪ್ರಭಾವತಿ, ಸುರೇಂದ್ರ ಶಾಂತಪ್ಪ ನಾವಳ್ಳಿ ಅಕಾಡೆಮಿ ಹಾಗೂ ಸಾಂಗ್ಲಿಯ ದಿಗಂಬರ ಜೈನ ಬೋರ್ಡಿಂಗ್ ಮತ್ತು ಪದವೀಧರ ಸಂಘಟನೆ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಚಾರಿತ್ರ್ಯ ಚಕ್ರವರ್ತಿ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಪುತ್ಥಳಿಗೆ ಛತ್ರ ಛಾಯಾ ಅನಾವರಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವ್ಯಾಪಾರದಲ್ಲಿ ಹೆಚ್ಚು ತೊಡಗಿರುವ ಜೈನ ಸಮಾದವರು, ತಮ್ಮ ಮಕ್ಕಳನ್ನು ಇತರ ಕ್ಷೇತ್ರಗಳಲ್ಲಿಯೂ ಬೆಳೆಸಬೇಕೆಂಬ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಪ್ರಾರಂಭಿಸಿರುವುದು ಸ್ವಾಗತಾರ್ಹ. ಬಡ ಮಕ್ಕಳು ಸಹ ಇಲ್ಲಿ ತರಬೇತಿ ಪಡೆದು, ಭವಿಷ್ಯ ಉಜ್ವಲಗೊಳಿಸಿಕೊಳ್ಳಲಿ ಎಂದು ಹಾರೈಸಿದರು.

ಆರ್ಥಿಕ ಸಮಸ್ಯೆ ಇರುವ ಅನೇಕ ಕುಟುಂಬಗಳ ವಿದ್ಯಾರ್ಥಿಗಳಿಗೆ ಜೈನ ಬೋರ್ಡಿಂಗ್ ಆಶ್ರಯ ನೀಡಿ, ಅವರ ಬದುಕಿಗೆ ಭದ್ರ ನೆಲೆ ಒದಗಿಸಿದೆ ಎಂದರು.

ಅತಿಥಿಯಾಗಿದ್ದ ಬೆಳಗಾವಿ ಗ್ರಾಮೀಣ ಶಾಸಕ ಅಭಯ ಪಾಟೀಲ ಮಾತನಾಡಿ, ಧಾರ್ವಿುಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಜತೆಗೆ ಸಮಾಜದ ಯುವಕರನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುವ ಕಾರ್ಯಗಳಾಗಬೇಕು ಎಂದರು.

ಮಠ-ಮಂದಿರಗಳು ಬೇಕು. ಅದರಿಂದ ಜನರಲ್ಲಿ ಧಾರ್ವಿುಕ ಭಾವನೆ, ಸಂಸ್ಕೃತಿ ಬೆಳೆಯುತ್ತದೆ. ಅದರೊಂದಿಗೆ ಯುವಕರನ್ನು ಐಎಎಸ್, ಐಪಿಎಸ್​ಗಳಂತಹ ಹುದ್ದೆಗಳ ಪರೀಕ್ಷೆ ಬರೆಯಲು ಸನ್ನದ್ಧಗೊಳಿಸಬೇಕು. ಅಧಿಕಾರಿಗಳಾಗುವ ಯುವಕರು ಜಾತಿ ಬೇಧ ಮರೆತು, ಎಲ್ಲರನ್ನೂ ಸಮಾನವಾಗಿ ಕಾಣಬೇಕು. ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಉತ್ತಮ ಸಮಾಜ ನಿರ್ವಣಗೊಳ್ಳುತ್ತದೆ ಎಂದರು.

ನಾಂದಣಿ ಶ್ರೀ ಕ್ಷೇತ್ರ ಜೈನ ಮಠದ ಶ್ರೀ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು ಹಾಗೂ ವರೂರು ನವಗ್ರಹ ತೀರ್ಥಕ್ಷೇತ್ರದ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಸಾಂಗ್ಲಿ ದಕ್ಷಿಣ ಭಾರತ ಜೈನ ಸಭಾ ಚೇರ್ಮನ್ ರಾವಸಾಹೇಬ ಪಾಟೀಲ, ಐಪಿಎಸ್ ಅಧಿಕಾರಿ ಜಿನೇಂದ್ರ ಕಣಗಾವಿ, ಸರ್ಕಾರದ ಅಧೀನ ಕಾರ್ಯದರ್ಶಿ ಅಜಿತ ಮುರಗುಂಡೆ, ಮಹೇಂದ್ರ ಸಿಂಘಿ, ಡಾ. ಅಜೀತ ಪಾಟೀಲ, ದತ್ತಾ ಡೋರ್ಲೆ, ಜಿ.ಜಿ. ಲೋಬೋಗೋಳ ಹಾಗೂ ಇತರರಿದ್ದರು.

ದೇಣಿಗೆ, ಸನ್ಮಾನ: ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನಕ್ಕೆ ಹುಬ್ಬಳ್ಳಿ ಜೈನ ಬೋರ್ಡಿಂಗ್​ನಿಂದ 1 ಲಕ್ಷ ರೂ. ದೇಣಿಗೆ ನೀಡಲಾಯಿತು. ದಾನಿ ಡಾ. ಮಮತಾ ಪಾಟೀಲ, ಹುಬ್ಬಳ್ಳಿ ದಿಗಂಬರ ಜೈನ ಸಮಾಜದ ನೂತನ ಅಧ್ಯಕ್ಷ ರಾಜೇಂದ್ರ ಬೀಳಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯಪುರ ಜಿಲ್ಲೆ ಇಂಡಿಯ ಡಿ.ಎನ್. ಅಕ್ಕಿ ಅವರನ್ನು ಸನ್ಮಾನಿಸಲಾಯಿತು.