ಜೇವರ್ಗಿ: ಬಸವೇಶ್ವರ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.31ರಿಂದ ಸೆ.2ರವರೆಗೆ ಸಂಭ್ರಮದಿAದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಜರುಗಲಿದೆ ಎಂದು ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ರಮೇಶಬಾಬು ವಕೀಲ, ಕಾರ್ಯದರ್ಶಿ ಶಾಮರಾವ್ ಕುಲಕರ್ಣಿ ರೇವನೂರ ತಿಳಿಸಿದ್ದಾರೆ.
ಪೂರ್ವಾರಾಧನೆ ನಿಮಿತ್ತ ಆ.31ರಂದು ಬೆಳಗ್ಗೆ ಸುಪ್ರಭಾತ, ಅಷ್ಟೋತ್ತರ ಹಾಗೂ ಶ್ರೀರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ ನಡೆಯಲಿದೆ. ಸೆ.1ರಂದು ಮಧ್ಯಾರಾಧನೆ ಹಿನ್ನೆಲೆಯಲ್ಲಿ ಅಪಾರ ಭಕ್ತರ ಮಧ್ಯೆ ಪಲ್ಲಕ್ಕಿ ಸೇವೆ ನಡೆಯಲಿದೆ. ನಂತರ ಗುರುರಾಜ ಹೇರೂರ ಹಾಗೂ ಸಂಗಡಿಗರಿಂದ ಭಜನೆ, ಸಂಜೆ 7ಕ್ಕೆ ಪಂ.ಹಣಮಂತರಾವ್ ಮಳ್ಳಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಸಮಿತಿಯಿಂದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು.
ಸೆ.2ರಂದು ಉತ್ತರಾರಾಧನೆ ನಿಮಿತ್ತ ಶ್ರೀರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಸ್ಥಳೀಯ ಮಹಿಳೆಯರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.