ಶ್ರೀ ನಿರಗುಡಿ ಮುತ್ತ್ಯಾ 
ಜಿಲ್ಲೆ

ಜೇವರ್ಗಿಯಲ್ಲಿ ಕಾರ್ಗಿಲ್ ದಿವಸ್ ನಾಳೆ

ಕಲಬುರಗಿ: ಜೇವರ್ಗಿಯ ಭೂತಪುರ ಕಲ್ಯಾಣ ಮಂಟಪದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಮಂಗಳವಾರ( 26 ರಂದು) ಬೆಳಗ್ಗೆ 11.30ಕ್ಕೆ ಕಾರ್ಗಿಲ್ ವಿಜಯ ದಿವಸ್ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ ತಿಳಿಸಿದ್ದಾರೆ.

ಪ್ರತಿ ವರ್ಷ ಸಮಿತಿಯು ಅರ್ಥಪೂರ್ಣವಾಗಿ ಕಾರ್ಗಿಲ್ ವಿಜಯ ದಿವಸ್ ಆಚರಿಸುತ್ತಿದೆ. ಸಾರ್ವಜನಿಕರಲ್ಲಿ ದೇಶಭಕ್ತಿ ಮೂಡಿಸುವ, ವೀರ ಯೋಧರಿಗೆ ನಮಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಈ ಬಾರಿ ಜೇವರ್ಗಿಯಲ್ಲಿ 23ನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ನೇತೃತ್ವದಲ್ಲಿ ಬಸ್ ನಿಲ್ದಾಣದಿಂದ ಭೂಸನೂರು ಕಲ್ಯಾಣ ಮಂಟಪದವರೆಗೆ ವೀರ ಯೋಧರು ಹಾಗೂ ಸ್ವಾತಂತ್ರೃ ಹೋರಾಟಗಾರರ ಭಾವಚಿತ್ರದ ಭವ್ಯ ಮೆರವಣಿಗೆ ಮತ್ತು ಒಂದು ಕಿಮೀ ಉದ್ದದ ರಾಷ್ಟ್ರಧ್ವಜ(ತಿರಂಗಾ) ಯಾತ್ರೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದ್ದೂರಿ ಸಮಾರಂಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಮಾಜಿ ಸೈನಿಕರನ್ನು ಗೌರವಿಸಲಾಗುವುದು. ಶಾಲಾ ಮಕ್ಕಳಿಂದ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಲವು ವಾಗ್ಮಿಗಳು ವೀರ ಯೋಧರು ಮತ್ತು ದೇಶದ ಹೆಮ್ಮೆಯ ಪುತ್ರರ ಕುರಿತು ಉಪನ್ಯಾಸ ನೀಡುವರು. ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳುವರು. ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ದೇಶಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.