ಜಿಲ್ಲೆ

ಜೇನು ಪರಿಸರಕ್ಕೆ ಪೂರಕ, ರೈತರಿಗೆ ಲಾಭದಾಯಕ

ಮೈಸೂರು: ಜೇನುನೊಣಗಳು ಪರಿಸರಕ್ಕೆ ಪೂರಕ ಹಾಗೂ ರೈತರಿಗೆ ಲಾಭದಾಯಕ ಎಂದು ಮಂಡ್ಯ ವಿ.ಸಿ. ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎನ್.ಶಿವಕುಮಾರ್ ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಜೇನುನೊಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲಿ ಜೇನುನೊಣಗಳು ಇವೆಯೋ ಅಲ್ಲಿ ಗಾಳಿ ಶುದ್ಧವಾಗಿ, ನೀರು ಸ್ವಚ್ಛವಾಗಿದೆ ಎಂದರ್ಥ ಎಂದರು.

ಜೇನುನೊಣಗಳು ಪರಾಗಸ್ಪರ್ಶ ಮಾಡುವುದರಿಂದ ಬೆಳೆಗಳ ಇಳುವರಿ ಚೆನ್ನಾಗಿ ಬರುತ್ತದೆ. ಹೀಗಾಗಿ ರೈತರು ಮಿತ್ರ ಕೀಟುಗಳು ಯಾವುದು, ಶತ್ರು ಕೀಟಗಳು ಯಾವುದು ಎಂಬುದನ್ನು ಅರಿಯಬೇಕು. ಶತ್ರು ಕೀಟಗಳನ್ನು ನಾಶಪಡಿಸಲು ಔಷಧ ಸಿಂಪಡಿಸಿ ಮಿತ್ರ ಕೀಟಗಳನ್ನು ಹಾಳು ಮಾಡಬಾರದು. ರಸಗೊಬ್ಬರ, ಔಷಧಯನ್ನು ಅಡ್ಡಾದಿಡ್ಡಿಯಾಗಿ ಬಳಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯನ್ನು ರೈತರು ಮನವರಿಕೆ ಮಾಡಿಕೊಳ್ಳಬೇಕು. ಹೆಚ್ಚು ಔಷಧ ಸಿಂಪಡಿಸಿದರೆ ನಾವು ತಿನ್ನುವ ಆಹಾರದ ಮೇಲೆ ಪರಿಣಾಮವಾಗುತ್ತದೆ ಎಂದು ಎಚ್ಚರಿಸಿದರು. ಉಪ ಕಸುಬುಗಳಾದ ಜೇನು, ಕುರಿ, ಕೋಳಿ, ಮೀನು ಸಾಕಾಣಿಕೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾಗ ಕೈಹಿಡಿಯುತ್ತವೆ ಎಂದು ಹೇಳಿದರು.

ವಿಶ್ವ ಜೇನುನೊಣ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದ ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯ ಕೀಟಶಾಸ್ತ್ರವಿಭಾಗದ ಪ್ರಾಧ್ಯಾಪಕ ಡಾ.ಎಲ್. ವಿಜಯಕುಮಾರ್, ಪರಿಸರಕ್ಕೆ, ಕೃಷಿಗೆ ಜೇನುನೊಣುಗಳು ಮುಖ್ಯ. ಆದರೆ. ಔಷಧವನ್ನು ಅವಶ್ಯವಿರುವ ಕಡೆ ಮಾತ್ರ ಅದರಲ್ಲೂ ಕನಿಷ್ಟ ಪ್ರಮಾಣದಲ್ಲಿ ಬಳಸಬೇಕು ಎಂದು ಸಲಹೆ ಮಾಡಿದರು.

ಬಿಳಿಗಿರಿ ರಂಗನಬೆಟ್ಟದ ದೊಡ್ಡ ಸಂಪಿಗೆ ಸುತ್ತಮುತ್ತ ಜೇನುನೊಣಗಳು ಹೆಚ್ಚಾಗಿವೆ. ಏಕೆಂದರೆ ಅಲ್ಲಿ ಜೀವವೈವಿಧ್ಯತೆ ಉತ್ತಮವಾಗಿದೆ. ಒಂದು ಎಕರೆಯಲ್ಲಿ 10-20 ಜೇನು ಪೆಟ್ಟಿಗೆ ಇಟ್ಟರೆ ಇಳುವರಿ ಹೆಚ್ಚಾಗುತ್ತದೆ ಎಂದರು. ಜೇನು ಸಾಕಣೆಗೆ ಸರ್ಕಾರ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಸಿಗಲಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಜೇನು ಸಾಕಣೆ ಕುರಿತು ನಂಜನಗೂಡು ತಾಲೂಕಿನ ಮುದ್ದಹಳ್ಳಿಯ ಪ್ರಗತಿಪರ ರೈತ ಚಿಕ್ಕಸ್ವಾಮಿ ಮಾತನಾಡಿ, ಜೇನು ಸಾಕಣೆಯಿಂದಾಗಿ ನನ್ನ ತೆಂಗಿನ ತೋಟದಲ್ಲಿ ಐದು ಸಾವಿರ ಬದಲು ಹನ್ನೆರಡು ಸಾವಿರ ಕಾಯಿಗಳು ಬರುತ್ತಿವೆ ಎಂದರು.

ರೈತರು ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ಕೃಷಿ ಹೊಂಡ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಇದ್ದಲ್ಲಿ ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಎಸ್.ಬಿ.ಮಮತಾ ಮಾತನಾಡಿ, ಸಸ್ಯಗಳಲ್ಲಿ ಪರಾಗ ಕ್ರಿಯೆ ನಡೆಯಬೇಕಾದರೆ ಜೇನು ನೋಣಗಳು ಮುಖ್ಯ ಎಂದರು. ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಮಾತನಾಡಿ, ಯಾವುದೇ ರೈತರು ಭೂಮಿ ಮಾರಾಟ ಮಾಡಬಾರದು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು ಎಂದರು.

ಬೇಸಾಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಕೇಂದ್ರ ಕೃಷಿ ಮುಂದಾಳು ಡಾ.ಸಿ.ರಾಮಚಂದ್ರ ಮಾತನಾಡಿ, ಸೂರ್ಯಕಾಂತಿ, ಎಳ್ಳು, ಕೊತ್ತಂಬರಿ ಸೇರಿದಂತೆ ಯಾವುದೇ ಬೆಳೆಗಾದರೂ ಪರಾಗಕ್ರಿಯೆಗೆ ಜೇನುನೋಣಗಳು ಬೇಕು ಎಂದರು.

ಮಣ್ಣು ಚೆನ್ನಾಗಿದ್ದರೆ ಆಹಾರ, ಆಹಾರ ಚೆನ್ನಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು.

ಸಾಧ್ಯವಾದಷ್ಟು ಸಮಗ್ರ ಹಾಗೂ ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು ಎಂದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಹ ಪ್ರಾಧ್ಯಾಪಕ ಡಾ.ಉಮಾಶಂಕರ್, ಸಹಾಯಕ ಪ್ರಾಧ್ಯಾಪಕರಾದ ಡಾ.ಶಿವಕುಮಾರ್, ಡಾ.ಆರ್.ಎನ್. ಪುಷ್ಪಾ ಇದ್ದರು