ಅರಕಲಗೂಡು: ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೇನು ನೊಣಗಳು ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಶಾಸಕ ಎ. ಮಂಜು ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಅರಣ್ಯ ಇಲಾಖೆ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಜೇನುಹುಳು ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಜೇನು ಸಂತತಿ ನಾಶವಾದಲ್ಲಿ ಮನುಷ್ಯ ಕುಲವೂ ನಾಶವಾಗುತ್ತದೆ ಎಂಬ ಜಾಗೃತಿ ಅಗತ್ಯ. ಜೇನು ಮನಷ್ಯನ ಆರೋಗ್ಯಕ್ಕೆ ಉಪಯುಕ್ತವಾಗಿದೆ. ರೈತರು ಜೇನು ಸಾಕಣೆಯನ್ನು ಉಪ ಕಸುಬಾಗಿ ಮಾಡಿಕೊಳ್ಳುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದರು.
ಸಕಲೇಶಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿ, ಜೇನು ನೊಣಗಳ ಮಹತ್ವ ಹಾಗೂ ಜೇನು ಕೃಷಿ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಜೇನುನೊಣಗಳ ದಿನಾಚರಣೆ ಅಚರಿಸಲಾಗುತ್ತಿದೆ. ರಾಸಾಯನಿಕ ಮತ್ತು ಕೀಟನಾಶಕಗಳ ಬಳಕೆಯಿಂದ ಜೇನು ಹುಳುವಿನ ಸಂತತಿ ಅಳಿಯುತ್ತಿದೆ ಎಂದರು.
ಮಡಿಕೇರಿ ಅರಣ್ಯ ಸಂಶೋಧನಾ ಘಟಕದ ಉಪ ವಲಯ ಅರಣ್ಯಾಧಿಕಾರಿ ಚರಣ್‌ಕುಮಾರ್, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆರ್.ಎನ್.ಕೆಂಚಾರೆಡ್ಡಿ, ಸಹಾಯಕ ತೋಟಗಾರಿಕೆ ಅಧಿಕಾರಿ ಡಿ.ರಾಜೇಶ್, ಬೆಂಗಳೂರಿನ ಹನಿ ಡೇ ಬೀ ಫಾರ್ಮ್ ಸಂಸ್ಥಾಪಕ ಬಿ.ವಿ.ಅಪೂರ್ವಾ ಮಾತನಾಡಿದರು.
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ವಲಯ ಅರಣ್ಯಾಧಿಕಾರಿ ಯಶ್ಮಾ ಮಾಚಮ್ಮ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮ್ ಭಟ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಭು, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ.ಯೋಗಣ್ಣ, ಉಪ ವಲಯ ಅರಣ್ಯಾಧಿಕಾರಿಗಳಾದ ಶಂಕರ್, ಲಕ್ಷ್ಮೀನಾರಾಯಣ್ ಇದ್ದರು.
ಕಾರ್ಯಕ್ರಮಕ್ಕೆ ಮುನ್ನ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಕಾರ್ಯಕ್ರಮದ ಪ್ರಯುಕ್ತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.