ಜಿಲ್ಲೆ

ಜೆಸ್ಕಾಂ ವಿಭಾಗೀಯ ಕಚೇರಿ ಎಇಗೆ ರೈತಸಂಘ ಮನವಿ

ಹಗರಿಬೊಮ್ಮನಹಳ್ಳಿ: ಹೂವಿನ ಹಡಗಲಿ ತಾಲೂಕಿನ ಎಫ್-1 ಶಿವಪುರ ಲೈನ್‌ನಿಂದ ಗುಜನೂರು ಕಡೆಯ 11 ಕೆವಿ ಲೈನ್ ದುರಸ್ತಿಗೆ ಆಗ್ರಹಿಸಿ ಪಟ್ಟಣದ ಜೆಸ್ಕಾಂ ವಿಭಾಗೀಯ ಕಚೇರಿಯ ಎಇ ಭಾಸ್ಕರಗೆ ಕರ್ನಾಟಕ ರಾಜ್ಯ ರೈತ ಸಂಘದ ಹೂವಿನ ಹಡಗಲಿ ತಾಲೂಕು ಘಟಕದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಹೊಳಗುಂದಿ ಶಿವರಾಜ ಮಾತನಾಡಿ, ಜೆಸ್ಕಾಂನ ಎಫ್-1 ಶಿವಪುರ ಲೈನ್‌ನಿಂದ ಗುಜನೂರು ಕಡೆಗೆ ಹೋಗುವ 11 ಕೆವಿಯ ಐದು ಕಂಬಗಳು ಹಾಗೂ ತಂತಿಗಳು ಶಿಥಿಲಾವಸ್ಥೆಯಲ್ಲಿವೆ. ಪದೇ ಪದೆ ಲೈನ್ ತುಂಡರಿಸಿ ಬೀಳುವುದರಿಂದ ರೈತರಿಗೆ ತುಂಬ ಸಮಸ್ಯೆಯಾಗುತ್ತಿದೆ. ವಿದ್ಯುತ್ ಅವಘಡಗಳು ಕೂಡ ಸಂಭವಿಸಿವೆ. ಸಾಕು ಪ್ರಾಣಿಗಳು ಮೇವು ಅರಸಿ ಹೋಗಿ ಬಲಿಯಾಗಿವೆ ಎಂದು ತಿಳಿಸಿದರು.

ಈ ಕುರಿತು ಒಂದು ವರ್ಷದ ಹಿಂದೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕಾಳಜಿ ತೋರಿಲ್ಲ. ಕೂಡಲೇ ಸಮಸ್ಯೆಗೆ ಸ್ಪಂದಿಸದಿದ್ದರೆ ಜೆಸ್ಕಾಂ ವಿಭಾಗೀಯ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ಮೃತ್ಯುಂಜಯ ಸ್ವಾಮೀಜಿ, ಮಾಬುಸಾಬ್, ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಗುಜನೂರಿನ ಗೋಣಿಸ್ವಾಮಿ, ಶ್ರೀರಾಮ, ಮಾರುತಿ, ರಮೇಶ, ಕೊಟ್ರೇಶ, ಆನಂದ ಇದ್ದರು.