ಪಾಂಡವಪುರ: ವಿಶ್ವೇಶ್ವರಯ್ಯ ನಾಲೆಯ ತಟದಲ್ಲಿ ಜೆಸಿಬಿ ತೊಳೆಯುತ್ತಿದ್ದ ಕ್ಲೀನರ್ ಕಾಣೆಯಾಗಿದ್ದಾನೆ.
ಈ ಬಗ್ಗೆ ಜೆಸಿಬಿ ಮಾಲೀಕ ಕೆ.ಬಿ.ಜಯಣ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಹಮ್ಮದ್ ಜಾಫರ್(22) ನಾಪತ್ತೆಯಾಗಿರುವ ಕ್ಲೀನರ್. ಪಟ್ಟಣದ ನಿವಾಸಿ ಕೆ.ಬಿ.ಜಯಣ್ಣ ಎಂಬುವರು ಫೆ.1ರಂದು ಮಧ್ಯಾಹ್ನ ಹಾರೋಹಳ್ಳಿ ಸಮೀಪ ವಿಶ್ವೇಶ್ವರಯ್ಯ ನಾಲೆಯ ಸೋಪಾನಕಟ್ಟೆ ಬಳಿ ಜೆಸಿಬಿ ಸ್ವಚ್ಛಗೊಳಿಸುವಂತೆ ಜೆಸಿಬಿ ಕ್ಲೀನರ್ ಮೊಹಮ್ಮದ್ ಜಾಫರ್‌ಗೆ ಸೂಚಿಸಿ ಊಟಕ್ಕೆ ಮನೆಗೆ ಹೋಗಿಬರುವಷ್ಟರಲ್ಲಿ ಜೆಸಿಬಿ ಮತ್ತು ಮಹಮ್ಮದ್ ಜಾಫರ್ ಸ್ಥಳದಲ್ಲಿರಲಿಲ್ಲ. ನಂತರ ಹುಡುಕಲಾಗಿ ಜೆಸಿಬಿ ವಿಶ್ವೇಶ್ವರಯ್ಯ ನಾಲೆ ಒಳಗಡೆ ಮುಳುಗಿತ್ತು. ಜೆಸಿಬಿ ತೊಳೆಯುತ್ತಿದ್ದ ಮಹಮ್ಮದ್ ಜಾಫರ್ ಕಾಣೆಯಾಗಿದ್ದ. ನೀರಿನಲ್ಲಿ ಮುಳುಗಿರಬಹುದು ಎಂದು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿಲ್ಲ. ಹಾಗಾಗಿ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿಕೊಂಡಿರುವ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತನ ಸುಳಿವು ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪ್ರಕಟಣೆಯಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.