ಜಿಲ್ಲೆ

ಜೆಡಿಎಸ್‌ಗೆ ಶಕ್ತಿ ತುಂಬುವವರ‌್ಯಾರು?

ತುಮಕೂರು: ರಾಜ್ಯಸಭೆ ಚುನಾವಣೆ ಹಾಗೂ ಆ ನಂತರದ ಪ್ರಹಸನ ಜಿಲ್ಲೆಯ ಜೆಡಿಎಸ್ ವಲಯದಲ್ಲಿ ದೊಡ್ಡ ನಿರಾಸೆಯನ್ನೇ ಮೂಡಿಸಿದೆ.

ಸತತ ನಾಲ್ಕು ಸಲ ಗುಬ್ಬಿ ಕ್ಷೇತ್ರದ ಶಾಸಕರಾಗಿರುವ ಎಸ್.ಆರ್.ಶ್ರೀನಿವಾಸ್ (ವಾಸು)ಪಕ್ಷ ತೊರೆಯುವುದು ಖಚಿತವಾಗಿದ್ದು ಜಿಲ್ಲಾ ಮಟ್ಟದಲ್ಲಿ ಪಕ್ಷಕ್ಕೆ ನಾಯಕತ್ವದ ಕೊರತೆ ಎದುರಾಗಿದೆ.

ಶ್ರೀನಿವಾಸ್ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವಿನ ಜಗಳ ಬೀದಿಗೆ ಬಂದಿದ್ದು, ಉಭಯ ಮುಖಂಡರು ಮಾಧ್ಯಮಗಳ ಮುಂದೆ ಪರಸ್ಪರರ ವಿರುದ್ಧ ಬಳಸಿರುವ ಭಾಷೆ ಕಾರ್ಯಕರ್ತರಿಗೆ ಇರಿಸು, ಮುರಿಸು ತಂದಿದೆ. ಎಸ್.ಆರ್.ಶ್ರೀನಿವಾಸ್ ಗುಬ್ಬಿ ಕ್ಷೇತ್ರದ ಶಾಸಕರಾಗಿದ್ದರೂ ತುಮಕೂರು ನಗರದಲ್ಲಿಯೂ ಕಾರ್ಯಕರ್ತರ ಜತೆ ಸಂಪರ್ಕದಲ್ಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ವಿವಿಧ ಸಂದರ್ಭದಲ್ಲಿ ಶ್ರೀನಿವಾಸ್ ನೆರವಾಗುತ್ತಿದ್ದರು.

ಶ್ರೀನಿವಾಸ್ ಪಕ್ಷ ತ್ಯಜಿಸುವುದು ಖಾತ್ರಿಯಾದ ನಂತರ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಯಜಮಾನ ಯಾರು ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಹಿರಿಯ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‌ಬಾಬು ಮುಂದಿನ ಚುನಾವಣೆಯಲ್ಲಿ ಗೆದ್ದರಷ್ಟೇ ರಾಜಕೀಯವಿದ್ದು, ಜಿಲ್ಲಾ ಮಟ್ಟದಲ್ಲಿ ನಾಯಕತ್ವ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ.

ಜಿಲ್ಲಾ ಕೇಂದ್ರದಲ್ಲಿ ರಾಜಕಾರಣ ನಡೆಯಬೇಕಿರುವ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಪಕ್ಷ ಮುನ್ನೆಡೆಸುವ ಜವಾಬ್ದಾರಿ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ.

ಜಿಲ್ಲೆಯಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ 10 ಕ್ಷೇತ್ರದಲ್ಲಿಯೂ ಜೆಡಿಎಸ್ ಪ್ರಬಲವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡರ ಸೋಲು, ಶ್ರೀನಿವಾಸ್ ಪಕ್ಷ ತ್ಯಜಿಸುವುದರಿಂದ ಮುಂದಿನ ಚುನಾವಣೆಗಳಲ್ಲಿಯೂ ಅದೇ ಶಕ್ತಿ ಉಳಿದಿರುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ.

ಜಿಲ್ಲೆಯಲ್ಲಿ ಪ್ರಬಲ ಪಕ್ಷವಾಗಿದ್ದರೂ ಸಂಘಟನೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜೆಡಿಎಸ್ ಹೋರಾಟ ಅಷ್ಟಕಷ್ಟೇ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಕ್ರಿಯವಾಗುವ ಪಕ್ಷದ ಭವಿಷ್ಯದ ಬಗ್ಗೆ ಸ್ಥಳೀಯ ಕಾರ್ಯಕರ್ತರಲ್ಲಿ ಆತಂಕ ಉದಯಿಸಿದೆ.

ಕೂಡಲೇ ರಾಜೀನಾಮೆ ನೀಡಲಿ

ಶಿರಾ: ಗುಬ್ಬಿ ಶಾಸಕ ಶ್ರೀನಿವಾಸ್ ಅವರ ತುಮಕೂರಿನ ಮನೆಮುಂದೆ ಪ್ರತಿಭಟನೆ ಮಾಡಿದ್ದ ಜೆಡಿಎಸ್ ಮುಖಂಡರೂ ಆದ ನಗರಸಭೆ ಸದಸ್ಯ ರವಿಶಂಕರ್ ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಶ್ರೀನಿವಾಸ್ ಕೂಡಲೇ ಕ್ಷಮೆಯಾಚಿಸಿ, ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಉಗ್ರೇಶ್ ಆಗ್ರಹಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಸ್ತೆಯಲ್ಲಿ ಕುಳಿತು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾಗ ಶಾಸಕ ಶ್ರೀನಿವಾಸ್ ಅವಾಚ್ಯವಾಗಿ ನಿಂದಿಸಿದ್ದಾರೆ. 4 ಬಾರಿ ಕುಮಾರಸ್ವಾಮಿಯವರ ಕೃಪೆಯಿಂದ ಜೆಡಿಎಸ್ ಶಾಸಕರಾಗಿ ಮಂತ್ರಿ ಪದವಿ ಗಳಿಸಿ, ಈಗ ಕುಮಾರಸ್ವಾಮಿಯವರಿಗೆ ತಾಕತ್ತಿದ್ದರೆ ಗುಬ್ಬಿಗೆ ಬಂದು ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲು ಹಾಕಿರುವುದು ಸರಿಯಲ್ಲ ಎಂದರು. ನಗರಸಭೆ ಅಧ್ಯಕ್ಷ ಅಂಜಿನಪ್ಪ, ಸದಸ್ಯ ಆರ್.ರಾಮು, ರವಿಶಂಕರ್, ಮುದಿಮಡು ರಂಗಸ್ವಾಮಿ, ಉದಯ್ ಶಂಕರ್, ರಹಮತ್ ಉಲ್ಲಾ ಖಾನ್, ಶ್ರೀರಂಗ, ರಾಘವೇಂದ್ರ, ನರಸಿಂಹಮೂರ್ತಿ ಇದ್ದರು.

ನನ್ನ ಸ್ವಂತ ಬಲದಿಂದಲೇ ಗೆಲ್ಲುತ್ತಿರುವೆ...

 ಗುಬ್ಬಿ: ನನ್ನ ಸ್ವಂತ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆದ್ದು ಬರುತ್ತಿದ್ದೇನೆ. ಕ್ಷೇತ್ರದ ಮತದಾರರ ಆಶೀರ್ವಾದ ಇದೆ, ಹಾಗಾಗಿ ಇದುವರೆಗೆ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಾಗಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಲಿಂಗೇಗೌಡ ಹಾಗೂ ಜಿ.ಟಿ.ದೇವೇಗೌಡ ಅವರ ಜತೆ ಚರ್ಚೆ ನಡೆಸಿದ ನಂತರ ನನ್ನ ಮನಸ್ಸಾಕ್ಷಿಗೆ ಒಪ್ಪುವ ರೀತಿ ಮತಚಲಾಯಿಸಿದ್ದೇನೆ. ಮತದಾನಕ್ಕೂ ಮುನ್ನ ಎಚ್.ಡಿ.ರೇವಣ್ಣ ಅವರಿಗೂ ಮತಪತ್ರ ತೋರಿಸಿದ್ದೆ. ಈಗ ಇಲ್ಲದ ಸುಳ್ಳು ಹೇಳಿ ಅವರ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಎಚ್‌ಡಿಕೆಯಿಂದ ನಾನು ನೀತಿ ಕಲಿಯಬೇಕಿಲ್ಲ ಎಂದರು. ರಾಜ್ಯದ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಸಿಗದ ಪರಿಸ್ಥಿತಿ ಜೆಡಿಎಸ್‌ಗೆ ಇರುವಾಗ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಈ ಬಾರಿ 13 ಸೀಟು ಗೆಲ್ಲಲಿ ಎಂದು ಶ್ರೀನಿವಾಸ್ ಸವಾಲು ಹಾಕಿದರು. ನಾನು ಬಿಜೆಪಿ ಸೇರಬೇಕೆಂದಿದ್ದರೆ ಯಡಿಯೂರಪ್ಪನವರು ಕರೆದಾಗಲೇ ಪಕ್ಷ ಸೇರಿ ಮಂತ್ರಿ ಆಗಬಹುದಿತ್ತು. ನಾನು ಒಂದು ಸಿದ್ಧಾಂತಕ್ಕೆ ಬದ್ಧವಾಗಿದ್ದೇನೆ. ಅಂತಹ ಬದ್ಧತೆ ಕುಮಾರಸ್ವಾಮಿಯಲ್ಲಿ ಇಲ್ಲ. ಕ್ಷೇತ್ರದ ಮತದಾರರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕುಮಾರಸ್ವಾಮಿ ಚಿತಾವಣೆಯಿಂದ ಪತ್ರಿಭಟನೆ ನಡೆಸುವವರಿಗೆ ನಾನು ಹೆದರುವುದಿಲ್ಲ ಎಂದು ತಿಳಿಸಿದರು. ಮುಖಂಡರಾದ ವಿಜಯಕುಮಾರ್, ವೆಂಕಟೇಶ್‌ಗೌಡ, ನರಸಿಂಹಮೂರ್ತಿ, ಶಿವಪ್ಪ, ರಾಜಣ್ಣ, ಚನ್ನಬಸವಯ್ಯ, ಗೋಪಾಲ್, ವೆಂಕಟೇಶ್, ಪ್ರಭಾಕರ್ ಇದ್ದರು.