ಜಿಲ್ಲೆ

ಜೆಡಿಎಸ್‌ಗೆ 30-40 ಸ್ಥಾನ ಬಂದರೂ ಸಿಎಂ ಆಗಲ್ಲ: ಎಚ್.ಡಿ.ಕುಮಾರಸ್ವಾಮಿ

ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ 30-40 ಸ್ಥಾನಗಳು ಬಂದರೂ ನಾನು ಅಧಿಕಾರದಿಂದ ದೂರ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.


ಜೆಡಿಎಸ್ ಶಾಸಕರು, ಮುಖಂಡರೊಂದಿಗೆ ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಜೆಡಿಎಸ್‌ಗೆ ಕಡಿಮೆ ಸ್ಥಾನ ಬಂದರೂ ಕುಮಾರಸ್ವಾಮಿ ಸಿಎಂ ಆಗುತ್ತಾರೆಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ. ನಾನು ಸಿಎಂ ಆಗಲ್ಲ. ಬದಲಿಗೆ ನಮ್ಮಲ್ಲೇ ಯಾರದರೂ ಒಬ್ಬರನ್ನು ಆ ಸ್ಥಾನದಲ್ಲಿ ಕೂರಿಸಿ ನಾನು ಮಾರ್ಗದರ್ಶನ ಮಾಡುತ್ತೇನೆ ಎಂದರು.


ನನಗೆ ಈ ಬಾರಿ ಸಂಪೂರ್ಣ ಬಹುಮತ ಕೊಡಿ, ಪಂಚರತ್ನ ಪರಿಕಲ್ಪನೆಯ 5 ಯೋಜನೆಗಳನ್ನು 5 ವರ್ಷಗಳ ಅವಧಿಯಲ್ಲಿ ಅನುಷ್ಠಾನ ಮಾಡುತ್ತೇನೆ. ಒಂದು ವೇಳೆ ಆ ಕಾರ್ಯಕ್ರಮ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ. ಚಾಮುಂಡಿಯ ಸನ್ನಿಧಾನದಲ್ಲಿ ಈ ಮಾತು ಹೇಳುತ್ತಿದ್ದೇನೆ. ಪಂಚರತ್ನ ಯೋಜನೆ ಜಾರಿ ಸಮ್ಮಿಶ್ರ ಸರ್ಕಾರದಿಂದ ಸಾಧ್ಯವಿಲ್ಲ. ಸಂಪೂರ್ಣ ಬಹುಮತದಿಂದ ಮಾತ್ರ ಸಾಧ್ಯ. ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಬಂದರೆ ಸಿಎಂ ಆಗುವುದಿಲ್ಲ ಎಂದರು.


ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಖಿಲ್ ಹೆಸರು:
ಮುಂದಿನ ಚುನಾವಣೆಗೆ ಜೆಡಿಎಸ್‌ನ 126 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಅದರಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರೂ ಇರಬಹುದು ಎಂದು ಕುಮಾರಸ್ವಾಮಿ ಸುಳಿವು ನೀಡಿದರು.
ನಿಖಿಲ್ ತಮ್ಮ ಶಕ್ತಿಯನ್ನು ಬಳಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನ ಮಾಡಿಕೊಂಡಿದ್ದಾರೆ. ಈಗ ಸಿದ್ಧವಾಗಿರುವ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರಬಹುದು ಅಥವಾ ಇಲ್ಲದೆಯೂ ಇರಬಹುದು ಎಂದು ಮುಗುಮ್ಮಾಗಿ ಹೇಳಿದರು.


3ನೇ ಪವರ್ ಸೆಂಟರ್ ಸೃಷ್ಟಿ
ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ಪಕ್ಷದಲ್ಲಿ ಕೆಲಸ ಮಾಡಲು ಎಷ್ಟು ಸ್ವಾತಂತ್ರ್ಯ ಇದೆ ಎಂಬುದು ಬಹಳ ಮುಖ್ಯ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಈಗಾಗಲೇ ಎರಡು ಅಧಿಕಾರ ಕೇಂದ್ರಗಳಿವೆ. ಖರ್ಗೆ ಅಧ್ಯಕ್ಷರಾಗುವ ಮೂಲಕ 3ನೇ ಪವರ್ ಸೆಂಟರ್ ಸೃಷ್ಟಿಯಾಗಿದೆ. ಆದರೆ, ಕನ್ನಡಿಗರೊಬ್ಬರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು ಎಂಬ ಸಂತೋಷ ಇದೆ ಎಂದರು.


ಸಿದ್ದರಾಮಯ್ಯ ಅವರ ಅಕ್ರಮದ ಕುರಿತು ಮುಖ್ಯಮಂತ್ರಿ ಬಳಿ ದಾಖಲೆ ಇದ್ದರೆ ತನಿಖೆ ಮಾಡಿಸಲಿ, ಏಕೆ ವಿಳಂಬ ಮಾಡುತ್ತಿದ್ದೀರಾ? ನಿಮ್ಮ ಭಾಷಣ ಆರೋಪಕ್ಕೆ ಸೀಮಿತವಾಗಬಾರದು. ಸಿದ್ದರಾಮಯ್ಯ ಕೂಡ ತನಿಖೆಗೆ ಆಗ್ರಹಿಸಿದ್ದಾರೆ. ನೀವು ಮೊದಲು ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು.


ಇತ್ತೀಚೆಗೆ ಕಾಂಗ್ರೆಸ್, ಬಿಜೆಪಿ ನಾಯಕರು ಪರಸ್ಪರ ಟೀಕೆ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ವಿಚಾರವನ್ನೇ ಎತ್ತುತ್ತಿಲ್ಲ. ಅದರ ಅರ್ಥವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಜೆಡಿಎಸ್ ಪಕ್ಷವನ್ನು ಒಳ್ಳೆಯತನದಲ್ಲಿ ಇಟ್ಟುಕೊಳ್ಳಲು ಕಾಂಗ್ರೆಸ್, ಬಿಜೆಪಿ ಈ ಕೆಲಸ ಮಾಡುತ್ತಿವೆ. ಈ ಎರಡೂ ಪಕ್ಷಗಳಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಯಾವ ವಿಶ್ವಾಸವೂ ಇಲ್ಲ. ಜೆಡಿಎಸ್ ಅವಶ್ಯಕತೆ ಬೇಕಾಗಬಹುದೆಂದು ನಮ್ಮನ್ನು ಯಾರೂ ಟೀಕೆ ಮಾಡುತ್ತಿಲ್ಲ. ಇದೆಲ್ಲವೂ ನನಗೆ ಅರ್ಥವಾಗಿದೆ ಎಂದು ವ್ಯಂಗ್ಯವಾಡಿದರು.

150 ಮುಖಂಡರೊಂದಿಗೆ ಚಾ.ಬೆಟ್ಟಕ್ಕೆ ಎಚ್‌ಡಿಕೆ ಭೇಟಿ


ಜೆಡಿಎಸ್‌ನ 150 ಮುಖಂಡರೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಮುಂಡಿ ದೇವಿಯ ದರ್ಶನ ಮಾಡಿದರು. ಪಕ್ಷದ ಸಂಘಟನಾ ಸಭೆಯಲ್ಲಿ ಭಾಗವಹಿಸಲೆಂದು ಮೈಸೂರಿಗೆ ಆಗಮಿಸಿರುವ ರಾಜ್ಯದ ವಿವಿಧ ಭಾಗದ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಮುಖಂಡರು ಸೇರಿದಂತೆ 150 ಜನರನ್ನು ಮೂರು ಬಸ್‌ಗಳಲ್ಲಿ ಚಾಮುಂಡಿಬೆಟ್ಟಕ್ಕೆ ಕರೆತರಲಾಗಿತ್ತು. ಇವರೊಂದಿಗೆ ಬಂದ ಎಚ್‌ಡಿಕೆ ಮತ್ತಿತರ ದಳಪತಿಗಳು ತಾಯಿ ಚಾಮುಂಡಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದರು.