ಹೊಳೆನರಸೀಪುರ: ಜೆಡಿಎಸ್, ಬಿಜೆಪಿ ಹಾಗೂ ಕೆಆರ್‌ಎಸ್ ಪಕ್ಷದ ಅಭ್ಯರ್ಥಿಗಳು ಸೋಮವಾರದಂದೇ ನಾಮಪತ್ರ ಸಲ್ಲಿಸುವುದರೊಂದಿಗೆ ಹೊಳೆ ನರಸೀಪುರದ ಚುನಾವಣಾ ಅಖಾಡ ರಂಗೇರಿದೆ.
ಜೆಡಿಎಸ್ ಪಕ್ಷದ ಅಭ್ಯರ್ಥಿ ಹೆಚ್.ಡಿ ರೇವಣ್ಣ ಬೆಳಿಗ್ಗೆ 9.15 ಗಂಟೆಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಬೆಂಬಲಿಗರೊಂದಿಗೆ ಕೋಟೆ ಬೀದಿ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿ ನಂತರ ಮಧ್ಯಾಹ್ನ 12.15 ಗಂಟೆಗೆ ತಾಲ್ಲೂಕು ಕಚೇರಿಯ ಆರ್.ಓ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ದೇವೇಗೌಡರ ಆಶೀರ್ವಾದದಿಂದ ಸತತವಾಗಿ ಐದು ಬಾರಿ ಗೆದ್ದಿದ್ದೀನಿ. ಹೊಳೆನರಸೀಪುರದ ಲಕ್ಷ್ಮೀನರಸಿಂಹ ಸ್ವಾಮಿ, ಮಹಾಲಕ್ಷ್ಮೀ, ಹರದನಹಳ್ಳಿ ಈಶ್ವರ, ದೇವಿರಮ್ಮ, ರಾಘವೇಂದ್ರಸ್ವಾಮಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದೇನೆ. ಐದು ವರ್ಷದಲ್ಲಿ ಈ ತಾಲೂಕಿನ ಕೆಲಸವನ್ನು ಸಾಕಷ್ಟು ಮಾಡಿದ್ದೇನೆ.
ನೀರಾವರಿ, ರಸ್ತೆ, ವಿದ್ಯುತ್, ಮಳೆಯಿಂದ ಹಾನಿಗೊಳಗಾದ 1990 ಮನೆಗಳು ನಿರ್ಮಾಣ, ಬಡವರಿಗೆ ನಮ್ಮ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಈ ಹಿಂದೆ ಈ ಕ್ಷೇತ್ರವನ್ನು ದೇವೇಗೌಡರು ಪ್ರತಿನಿಧಿಸುತ್ತಿದ್ದರು. ಅದಾದ ಮೇಲೆ ನಾನು ಪ್ರತಿನಿಧಿಸುತ್ತಿದ್ದೇನೆ. ಮುಂದೆ ಜನತೆ ಆಶೀರ್ವಾದದಿಂದ ಈ ತಾಲೂಕಿನ ಜನರ ಪರ ಕೆಲಸ ಮಾಡುತ್ತೇನೆ. ಪ್ರತಿ ಸಾರಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ಈ ಬಾರಿಯೂ ಗೆಲ್ಲಿಸುತ್ತಾರೆ ಎಂದು ಹೇಳಿದರು.
ಹಾಸನ ಜಿಲ್ಲೆಯ ಏಳು ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲುವುದು ನಿಶ್ಚಿತ. ಎಲ್ಲ ಕಡೆಯೂ ಪ್ರಚಾರ ಕೈಗೊಳ್ಳಲಾಗುವುದು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಅಂಗೀಕಾರ ಆಗುತ್ತಿದ್ದಂತೆ ಪ್ರಚಾರ ಆರಂಭಿಸಲಾಗುವುದು ಎಂದರು.
ಇಂದೇ ಬಿಜೆಪಿ ಪಕ್ಷದ ಅಭ್ಯರ್ಥಿ ಜಿ. ದೇವರಾಜೇಗೌಡ ಅವರು ಬೆಳಿಗ್ಗೆ 11.00 ಗಂಟೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬೆಂಬಲಿಗರೊಂದಿಗೆ ಕೋಟೆ ಬೀದಿ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿ ಮಾಲಾರ್ಪಣೆ ಮಾಡಿ, ನಂತರ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ 2.00 ಗಂಟೆಗೆ ತಾಲೂಕು ಆರ್.ಒ. ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಬೀಚೇನಹಳ್ಳಿ ನಾಗರಾಜ್ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.