ಮೈಸೂರು: ಜೆಡಿಎಸ್‌ನ 9 ಶಾಸಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಫೆಬ್ರವರಿ ಹೊತ್ತಿಗೆ ಪಕ್ಷ ಸೇರುವುದು ನಿಶ್ಚಿತ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಭಾಗದ ಶಾಸಕರು ಈಗಾಗಲೇ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಅವರೇ ಖುದ್ದು ಪಕ್ಷದ ಹೈಕಮಾಂಡ್ ಅವರನ್ನು ಭೇಟಿ ಮಾಡಿದ್ದಾರೆ. ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿಯಾಗಿರುವ ಹಿನ್ನೆಲೆಯಲ್ಲಿ ಅವರೆಲ್ಲ ನಮ್ಮ ಪಕ್ಷಕ್ಕೆ ಬರಲು ಸಜ್ಜಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಷರತ್ತು ಹಾಕಿ ಬರುವುದಾದರೆ ಬೇಡ ಅಂದಿದ್ದೇವೆ. ನಮಗೆ ಅವರ ಅವಶ್ಯಕತೆ ಇಲ್ಲ. ಆದರೆ ಅವರೇ ಈಗ ದುಂಬಾಲು ಬಿದ್ದಿರುವುದರಿಂದ ಪರಿಗಣಿಸುತ್ತೇವೆ. ಬಿಜೆಪಿ ಜತೆ ಹೋದರೆ ಗೆಲ್ಲುವುದಕ್ಕೆ ಅವಕಾಶವಿಲ್ಲ. ನಮ್ಮ ಕ್ಷೇತ್ರದ ಜನರು ನಮಗೆ ಮತ ಹಾಕಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಬರುತ್ತೇವೆ ಎಂದಿದ್ದಾರೆ. ಹೈಕಮಾಂಡ್ ಈ ಬಗ್ಗೆ ಅಂತಿಮ ನಿರ್ಧಾರ ಮಾಡಲಿದೆ ಎಂದರು.
ಕೆಆರ್‌ಎಸ್ ರಸ್ತೆ ನಕ್ಷೆ ನಕಲಿ
ಕೆಆರ್‌ಎಸ್ ರಸ್ತೆಗೆ ಸಂಬಂಧಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಲ್ಲಿಸಿದ ರಸ್ತೆಯ ನಕ್ಷೆ ನಕಲಿಯಾಗಿದೆ. ಜನರನ್ನು ದಿಕ್ಕು ತಪ್ಪಿಸಲು ಬಿಜೆಪಿಯವರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂಬುದಕ್ಕೆ ನಕಲಿ ನಕ್ಷೆ ಸಲ್ಲಿಕೆ ಸಾಕ್ಷಿಯಾಗಿದೆ ಎಂದು ಎಂ.ಲಕ್ಷ್ಮಣ್ ದೂರಿದರು.
ಮಾಜಿ ಮೇಯರ್ ಸಂದೇಶ್ ಬಿಡುಗಡೆ ಮಾಡಿದ ನಕ್ಷೆ ಸ್ಯಾಟ್‌ಲೈಟ್ ಪ್ರಿಂಟ್‌ಔಟ್ ತೆಗೆದುಕೊಂಡು ಅದರ ಮೇಲೆ ಅಕ್ಷರಗಳನ್ನು ಬರೆದಿರುವುದು ಸ್ಪಷ್ಟವಾಗಿದೆ. ಸೃಷ್ಟಿಸಲಾದ ಮ್ಯಾಪ್ ಅನ್ನೇ ಸಂಸದರು ಸಲ್ಲಿಸಿದ್ದಾರೆ ಎಂದರು.
ರಾಜ್ಯ ಸಾರಿಗೆ ಸಂಸ್ಥೆ ಇತಿಹಾಸದಲ್ಲೇ ಪ್ರಯಾಣ ದರವನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡಿರುವಷ್ಟು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಬಿಜೆಪಿ ಸರ್ಕಾರ ಸಂದರ್ಭದಲ್ಲಿ ಅಂದರೆ 2008ರಲ್ಲಿ ಶೇ.12, 2009ರಲ್ಲಿ ಶೇ.3.5 ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ನಂತರ 2010ರಲ್ಲೂ ಕೂಡ ಶೇ.4.76 ಹೆಚ್ಚಳ ಮಾಡಿದ್ದರು. 2011ರಲ್ಲಿ ಶೇ.6.9 ಮತ್ತು 5.01, 2012ರಲ್ಲಿ ಶೇ.12ರಷ್ಟು ಪ್ರಯಾಣ ದರ ಏರಿಕೆ ಮಾಡಿತ್ತು. ಹೀಗೆ ಐದು ವರ್ಷದ ಅವಧಿಯಲ್ಲಿ 8 ರಿಂದ 9 ಬಾರಿ ದರ ಹೆಚ್ಚಳ ಬಿಜೆಪಿ ಮಾಡಿತ್ತು ಎಂದರು.
ರಾಜ್ಯದ ಸಾರಿಗೆ ಸಂಸ್ಥೆಯ ಇತಿಹಾಸದಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡಿರುವುದು ಇದ್ದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಆದರೆ 2020ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಶೇ.12ರಷ್ಟು ದರವನ್ನು ಹೆಚ್ಚಳ ಮಾಡಿತ್ತು ಎಂದರು.
ಕಾಂಗ್ರೆಸ್ ಸರ್ಕಾರ 4 ವರ್ಷಗಳ ನಂತರ ಪ್ರಯಾಣದ ದರವನ್ನು ಹೆಚ್ಚಳ ಮಾಡುತ್ತಿದೆ. ಬಿ.ಶ್ರೀರಾಮುಲು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಸಾರಿಗೆ ನೌಕರರು ಮುಷ್ಕರ ಮಾಡಿದ್ದರು. ಬಿಜೆಪಿ ಅವರು ಎಸ್ಮಾ ಜಾರಿಗೆ ಮಾಡಿ 3 ಸಾವಿರ ನೌಕರರನ್ನು ವಜಾ ಮಾಡಿದ್ದರು. ಆ ನೌಕರರು ಇಂದಿಗೂ ಕೋರ್ಟ್‌ಗೆ ಅಲೆಯುತ್ತಿದ್ದಾರೆ ಎಂದರು.
ಬಿಜೆಪಿ 4 ನಿಗಮಗಳ ಮೇಲೆ 5,900 ಕೋಟಿ ರೂ. ಸಾಲ ಮಾಡಿ ಹೋಗಿದೆ. ಕಾಂಗ್ರೆಸ್ ಸರ್ಕಾರ ಈವರೆಗೆ ಶಕ್ತಿ ಯೋಜನೆಯಡಿ 4 ನಿಗಮಗಳಿಗೆ 6543 ಕೋಟಿ ರೂ. ಬಿಡುಗಡೆ ಮಾಡಿದೆ. ನೌಕರರ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆ ಮಾಡುತ್ತಿದ್ದ ಆರ್.ಅಶೋಕ್ ವರ್ತನೆ ನೋಡಿದರೆ ಅವರು ವಿರೋಧ ಪಕ್ಷದ ನಾಯಕರಾಗಲು ಅನರ್ಹರು. ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ ತೋರಿಸುತ್ತಾರೆ. ಪೊಲೀಸರು ಅವರ ಮೇಲೆ ಏಕೆ ಕ್ರಮವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾಧ್ಯಮ ವಕ್ತಾರ ಕೆ. ಮಹೇಶ್, ಸೇವಾದಳದ ಗಿರೀಶ್ ಇದ್ದರು.