ನಾಗಮಂಗಲ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮತದಾರರು ಈ ಬಾರಿ ತಿರಸ್ಕರಿಸಿ, ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೆ ಹಾಕುವ ಪ್ರತಿಯೊಂದು ಮತವೂ ಒಬ್ಬ ರೈತನನ್ನು ಉಳಿಸಿದಂತಾಗುತ್ತದೆ ಎಂದು ಶಾಸಕ ಸುರೇಶ್‌ಗೌಡ ಹೇಳಿದರು.
ತಾಲೂಕಿನ ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಗಿಡುವಿನಹೊಸಹಳ್ಳಿ ಗ್ರಾಮದಲ್ಲಿ ಮಾತನಾಡಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಜನರ ಬದುಕನ್ನು ಡೋಲಾಯಮಾನ ಸ್ಥಿತಿಗೆ ದೂಡಿವೆ. ರಾಜ್ಯದಲ್ಲಿ ಬಡವರು, ರೈತರು, ದಲಿತರು, ಕಾರ್ಮಿಕರು ಉಳಿಯಬೇಕೆಂದರೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಹಾಕಿದ ಮತ ಹಿಂದಿವಾಲಗಳ ಅಭಿವೃದ್ಧಿಗೆ ಸಲ್ಲುತ್ತದೆ. ಆದರೆ ಜೆಡಿಎಸ್‌ಗೆ ನೀಡುವ ಒಂದೊಂದು ಮತವು ಒಬ್ಬೊಬ್ಬ ರೈತನನ್ನು ಉಳಿಸುವುದಕ್ಕೆ ಆಗಿದೆ. ರಾಜ್ಯದಲ್ಲಿ ರೈತರು, ದೀನದಲಿತರು, ಬಡವರು ಹಾಗೂ ಕೂಲಿಕಾರ್ಮಿಕರ ಹೊಟ್ಟೆಮೇಲೆ ಹೊಡೆದು ಅವರ ದುಡ್ಡಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಧಿಕಾರವನ್ನು ನಡೆಸಿವೆ. ಈ ಎರಡೂ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿದ್ದು, ಉತ್ತರ ಭಾರತದ ತಮ್ಮ ನಾಯಕರನ್ನು ಅಭಿವೃದ್ಧಿಪಡಿಸಿದ್ದಾರೆಯೇ ಹೊರತು ರಾಜ್ಯವನ್ನಲ್ಲ ಎಂದರು.
ಬಿಜೆಪಿ ಸರ್ಕಾರ ಕನ್ನಡ ನಾಡಿನ ಎಲ್ಲ ಬ್ಯಾಂಕ್‌ಗಳನ್ನು ಉತ್ತರ ಭಾರತದ ಹಿಡಿತದಲ್ಲಿರುವ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡುವ ಮೂಲಕ ಕರ್ನಾಟಕಕ್ಕೆ ದ್ರೋಹವೆಸಗಿದೆ. ನಾಡು, ನುಡಿ, ನೆಲ, ಜಲ ವಿಚಾರವಾಗಿ ಧ್ವನಿ ಎತ್ತುವ ಪಕ್ಷ ಇದ್ದರೆ ಅದು ಜೆಡಿಎಸ್ ಮಾತ್ರ. ಅದೇ ರೀತಿ ಈಗ ನಂದಿನಿ ಮೇಲೆ ಹಿಂದಿವಾಲಗಳ ಕಣ್ಣು ಬಿದ್ದಿದ್ದು, ಅಮುಲ್ ಎಂಬುದನ್ನು ಒತ್ತಾಯಪೂರ್ವಕವಾಗಿ ರಾಜ್ಯದಲ್ಲಿ ಏರಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಕಾರ್ಡ್‌ಗೆ ವಾರಂಟಿ ಇಲ್ಲ, ಗ್ಯಾರಂಟಿನೂ ಇಲ್ಲ. ಆ ರೀತಿಯ ಸುಳ್ಳು ಭರವಸೆಗಳನ್ನು ಜೆಡಿಎಸ್ ಎಂದೂ ನೀಡಿಲ್ಲ. ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಹಿಂದೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದವರು ಯಾಕೆ ಬಗರ್‌ಹುಕಂ ನಲ್ಲಿ ಯಾವೊಂದು ಅರ್ಜಿಯನ್ನು ಮಂಜೂರು ಮಾಡಿ ಸಾಗುವಳಿ ನೀಡಲಿಲ್ಲ. ಇದರಿಂದ ಅವರಿಗೆ ಇರುವ ರೈತಪರ ಕಾಳಜಿ ಎಷ್ಟಿದೆ ಎಂಬುದು ತಿಳಿಯಲಿದೆ. ಆದರೆ ನಾನು ಪಕ್ಷತೀತವಾಗಿ ಒಂದು ರೂಪಾಯಿ ಪಡೆಯದೆ ಜಮೀನು ಮಂಜೂರು ಮಾಡಿ ಸಾಗುವಳಿ ಕೊಟ್ಟಿದ್ದೇನೆ ಎಂದರು.
ಹಣಕ್ಕಾಗಿ ಅಧಿಕಾರ ಮಾರಿಲ್ಲ: ಈ ಹಿಂದೆ ಅಧಿಕಾರದಲ್ಲಿದ್ದವರು ನೀವು ನೀಡಿದ್ದ ಅಧಿಕಾರವನ್ನು ಕೋಟ್ಯಂತರ ರೂಪಾಯಿ ಹಣಕ್ಕೆ ಮಾರಾಟ ಮಾಡಿಕೊಳ್ಳುವ ಮೂಲಕ ತಾಲೂಕಿನ ಜನರಿಗೆ ವಂಚನೆ ಮಾಡಿದ್ದಾರೆ. ನನಗೂ ಹಣದ ಆಮೀಷ ಬಂದಿದ್ದರೂ ತಾಲೂಕಿನ ಜನ ನೀಡಿರುವ ಅಧಿಕಾರವನ್ನು ಹಣಕ್ಕೆ ಮಾರಾಟ ಮಾಡಿಕೊಳ್ಳುವುದು ತನ್ನ ತಾಯಿಗೆ ದ್ರೋಹವೆಸಗಿದಂತೆ ಎಂದು ನಿಮ್ಮ ಸೇವೆ ಮಾಡುತ್ತಿದ್ದೇನೆ. ನಾನೆಂದು ನನ್ನ ಅಧಿಕಾರವನ್ನು ಯಾರಿಗೂ ಮಾರಾಟ ಮಾಡಿಕೊಳ್ಳುವವನಲ್ಲ. ಅಧಿಕಾರದ ಆಸೆಗಾಗಿ ದ್ರೋಹವೆಸಗಿ ಬೇರೆ ಪಕ್ಷಕ್ಕೆ ಹೋಗಿ ಮಂತ್ರಿಗಿರಿ ತೆಗೆದುಕೊಳ್ಳದೆ, ನೀವು ನೀಡಿರುವ ಅಧಿಕಾರದಲ್ಲಿಯೇ ಕೈಲಾದಷ್ಟು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.
ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅಡ್ಡಿ: ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಮಿನಿವಿಧಾನಸೌಧದ ಆವರಣದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಿಕೊಡುವುದಾಗಿ ನಾನು ದಲಿತ ಸಮುದಾಯಕ್ಕೆ ಮಾತುಕೊಟ್ಟಿದ್ದೆ. ಚುನಾವಣೆಯಲ್ಲಿ ಗೆದ್ದ ನಂತರ ಪ್ರತಿಮೆ ಸ್ಥಾಪಿಸಲು ಹೋದರೆ ವಿರೋಧಿಗಳು ಅಡ್ಡಿಪಡಿಸಿದ್ದರು. ಆ ಎಲ್ಲ ಅಡೆತಡೆಗಳ ನಡುವೆಯೂ ಪ್ರತಿಮೆ ಸ್ಥಾಪಿಸುವ ಮೂಲಕ ತಾಲೂಕಿನ ದಲಿತ ಸಮುದಾಯಕ್ಕೆ ನೀಡಿದ್ದ ಮಾತು ಉಳಿಸಿಕೊಂಡಿದ್ದೇನೆ. ಅದೇ ರೀತಿ ತಾಲೂಕಿನಲ್ಲಿ ಸ್ಥಾಪನೆಯಾಗಬೇಕಿದ್ದ ಕೈಗಾರಿಕೆಗೂ ಕುತಂತ್ರ ಮಾಡುವ ಮೂಲಕ ವಿರೋಧಿಗಳು ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಮಾತನಾಡಿ, ತಾಲೂಕಿನ ಎಲ್ಲ್ಲ ಹಳ್ಳಿಗಳಿಗೂ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡಿರುವುದು ಸುರೇಶ್‌ಗೌಡ ಮಾತ್ರ. ತಾಲೂಕಿನಲ್ಲಿರುವ ಸುಮಾರು 29 ಹಳ್ಳಿಗಳನ್ನು ಹೊರತುಪಡಿಸಿ ಉಳಿದೆಲ್ಲ್ಲ ಹಳ್ಳಿಗಳಿಗೂ ಸಿಸಿ ರಸ್ತೆ, ಚರಂಡಿ ಕಾಮಗಾರಿ ಮಾಡಿದ್ದಾರೆ. ತಾಲೂಕಿನಲ್ಲಿಯೇ ಮನೆ ಮಾಡಿಕೊಂಡು ಪ್ರತಿನಿತ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರ ಹಾದಿಯಲ್ಲಿ ಸಾಗುತ್ತಿರುವ ಸರಳತೆಯ ಶಾಸಕ ಸುರೇಶ್‌ಗೌಡ ಆಗಿದ್ದು, ಈ ಬಾರಿಯೂ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಮುಖಂಡರಾದ ಬೆಟ್ಟಸ್ವಾಮಿ, ಕಳ್ಳಿಗುಂದಿ ಮಂಜುನಾಥ್, ಶ್ರೀಧರ್ ಇತರರು ಜೆಡಿಎಸ್ ಸೇರ್ಪಡೆಯಾದರು. ಮುಖಂಡರಾದ ಬೆಟ್ಟಸ್ವಾಮಿಗೌಡ, ಕಲ್ಲೇನಹಳ್ಳಿ ದಿನೇಶ್, ದೇವರಾಜು, ನಾಗೇಗೌಡ, ಕೋಳಿನರಸಿಂಹ, ನಿಂಗೇಗೌಡ, ಯದುರಾಜು ಇದ್ದರು.