ಜಿಲ್ಲೆ

ಜೆಡಿಎಸ್‌ಗೆ ಬಹುಮತ ನೀಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿ

ಹಲಗೂರು: ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಸ್ವಾವಲಂಬನೆಯಿಂದ ಬದುಕಲು ಆರೋಗ್ಯ, ಉದ್ಯೋಗ, ಶಿಕ್ಷಣ, ಕೃಷಿ ಮತ್ತು ನೀರಾವರಿ ಯೋಜನೆಗಳ ಮೂಲಕ ಸಮಗ್ರ ಅಭಿವೃದ್ಧಿಗೆ ಈ ಬಾರಿ ಜೆಡಿಎಸ್‌ಗೆ ಪೂರ್ಣ ಬಹುಮತದ ಅಧಿಕಾರ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರಾಜ್ಯದ ಜನತೆಗೆ ಮನವಿ ಮಾಡಿದರು.


ಪಂಚ ರತ್ನ ಯೋಜನೆ ಯಾತ್ರೆಯಲ್ಲಿ ಮಂಗಳವಾರ ಹಲಗೂರು ಹಾಡ್ಲಿ ಮುಖ್ಯ ವೃತ್ತದಲ್ಲಿ ಮಾತಾನಾಡಿದ ಅವರು, ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದ ಕೊಡಲೇ ಪಂಚರತ್ನ ಯೋಜನೆ ಜಾರಿಗೆ ತರಲಾಗುವುದು. ಮುಖ್ಯವಾಗಿ ಸಾರ್ವಜನಿಕರಿಗೆ ಅಗತ್ಯವಾದ ಶಿಕ್ಷಣ ಮತ್ತು ಅರೋಗ್ಯವನ್ನು ಜಾತ್ಯತೀತ, ಲಿಂಗ ಭೇದವಿಲ್ಲದೆ ಸರ್ವರಿಗೂ ಉಚಿತವಾಗಿ ನೀಡಲಾಗುವುದು. ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದರು.


ಸಮಾಜದಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗ ಕೊಡಲು ಸಾಧ್ಯವಿಲ್ಲ. ಅದರೆ, ಸರ್ಕಾರದಿಂದ ಸ್ವಾವಲಂಬನೆಯ ಬದುಕು ಕಟ್ಟಿಕೊಡಲು ಕೌಶಲ ಅಭಿವೃದ್ಧಿ ಮಾಡಲು ಅಗತ್ಯ ತರಬೇತಿಗಳನ್ನು ಮತ್ತು ಸಾಲಸೌಲಭ್ಯಗಳನ್ನು ನೀಡಲಾಗುವುದು. ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.


ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ 24/7 ಕಾರ್ಯನಿರ್ವಹಿಸುವಂತ ಸುಸಜ್ಜಿತವಾದ 30 ಹಾಸಿಗೆಗಳು ಇರುವ ಹೈಟೆಕ್ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯಗಳು ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಎಲ್ಲ ವರ್ಗದವರಿಗೂ ಎಲ್‌ಕೆಜಿಯಿಂದ ಪಿಯುಸಿವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮಲ್ಲಿ ಉಚಿತವಾಗಿ ನೀಡಲಾಗುವುದು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯರಿಗೆ ಐದು ಸಾವಿರ ರೂ.ಗಳು ಹಾಗೂ ವಿಧವೆಯರಿಗೆ ಎರಡೂವರೆ ಸಾವಿರ ರೂ. ಪ್ರತಿ ತಿಂಗಳು ಪಿಂಚಣಿ ನೀಡಲಾಗುವುದು ಎಂದರು.


ಅಧುನಿಕ ತಂತ್ರಜ್ಞಾನ ಕೃಷಿ ಪದ್ಧತಿ ಅಳವಡಿಕೆ, ಬೆಳೆಗಳ ಶೇಖರಣೆಗೆ ಸೂಕ್ತ ದಾಸ್ತಾನು ಮಳಿಗೆ ವ್ಯವಸ್ಥೆ ಹಾಗೂ ಲಾಭದಾಯಕವಾದ ಮಾರುಕಟ್ಟೆಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಫಸಲ್ ಬಿಮಾ ಯೋಜನೆಯ ಮೂಲಕ ಬೆಳೆಗಳಿಗೆ ವಿಮೆ ವ್ಯವಸ್ಥೆಗಳನ್ನು ಮಾಡಿದ್ದರೂ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.


ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚಿನ ಅನುದಾನ ನೀಡಿದರೆ ಮಂಡ್ಯ ಜಿಲ್ಲೆಯ ಬಜೆಟ್ ಎಂದು ವ್ಯಂಗ್ಯ ಮಾಡಿದ ಬಿಜೆಪಿ ನಾಯಕರು ಈಗ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಈ ಜಿಲ್ಲೆಯ ಮತದಾರರ ಮತ ಕೇಳುವ ನೈತಿಕತೆ ಇದೆಯೆ? ಕಬ್ಬಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಹೋರಾಟ ಮಾಡುತ್ತಿರುವ ರೈತರ ಮನವಿಗೆ ಯಾವುದೇ ಸ್ಪಂದನೆ ನೀಡದೆ ಜಾಣ ಕಿವುಡು ನೀತಿ ಅನುಸರಿಸುತ್ತಿರುವ ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ದೂರವಿಡಿ ಎಂದರು.


ನಮ್ಮ ತೆರಿಗೆ ಹಣವನ್ನು ಪ್ರಸ್ತುತ ಸರ್ಕಾರ ಲೂಟಿ ಮಾಡಲಾಗುತ್ತಿದೆ. 40 ಪರ್ಸೆಂಟ್ ಡಬಲ್ ಇಂಜಿನ್ ಸರ್ಕಾರವನ್ನು ಸಂಪೂರ್ಣ ಬಂದ್ ಮಾಡಿ ನಮಗೆ ಒಂದು ಬಾರಿ 123 ಸೀಟ್‌ಗಳನ್ನು ಗೆಲ್ಲಿಸಿ ಕೊಟ್ಟು ಅಧಿಕಾರ ಕೊಡಿ. ನಿಮ್ಮ ತೆರಿಗೆಯ ಹಣವನ್ನು ಬಡಜನರ ಅಭಿವೃದ್ಧಿಗೆ ಸಂಪೂರ್ಣ ಸದ್ಬಳಕೆ ಮಾಡುವೆ ಎಂದು ತಿಳಿಸಿದರು.


ಶಾಸಕ ಡಾ.ಕೆ.ಅನ್ನದಾನಿ, ಪಾಂಡವಪುರ ಶಾಸಕ ಸಿ.ಎಸ್. ಪುಟ್ಟರಾಜು, ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಮೇಶ್, ಜಿಲ್ಲಾ ಯುವ ಘಟಕದ ಜಿಲ್ಲಾ ಅಧ್ಯಕ್ಷ ರವಿ ಕಂಸಾಗರ, ಜೆಡಿಎಸ್ ತಾಲೂಕು ಅಧ್ಯಕ್ಷ ವಿಶ್ವನಾಥ್ ಇತರರು ಇದ್ದರು.