ಮೈಸೂರು: ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ಸಮಾಲೋಚನೆ ಸಭೆಗೆ ಗೈರಾದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಅವರಿಗೆ ಸ್ಥಳೀಯವಾಗಿ ಒಂದಿಷ್ಟು ಸಮಸ್ಯೆಗಳಿವೆ. ಆ ಕಾರಣಕ್ಕಾಗಿ ಅವರು ಇಲ್ಲಿಗೆ ಬಂದಿಲ್ಲ. ನಮ್ಮ ಜತೆಯೇ ಇರುತ್ತೇನೆ ಎಂದು ಹೇಳಿದ್ದಾರೆ. ಇರುವುದು, ಬಿಡುವುದು ಅವರ ವೈಯಕ್ತಿಕ ನಿರ್ಧಾರ. ಅವರನ್ನು ಸೋಲಿಸುವ ಹುನ್ನಾರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ನಡೆಸಿವೆ. ಅದೆಲ್ಲದರ ಲೆಕ್ಕಾಚಾರದಲ್ಲಿ ಶಿವಲಿಂಗೇಗೌಡರು ತೊಡಗಿದ್ದಾರೆ ಎಂದರು.
ಈ ಕುರಿತು ಮಾತನಾಡಿದ ಎಚ್.ಡಿ.ದೇವೇಗೌಡರು, ಶಿವಲಿಂಗೇಗೌಡರ ಜತೆ ಮಾತನಾಡಿದ್ದೇನೆ. ಆತುರದಲ್ಲಿ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದೇನೆ. ತೀರ ಮೀರಿ ಹೊಸ ರಾಜಕೀಯ ಬೆಳವಣಿಗೆ ಆಗಿ, ಬೇರೆಯವರ ಮಾತಿಗೆ ಬೆಲೆ ಕೊಟ್ಟರೆ ನಾನು ಏನು ಮಾಡಲು ಸಾಧ್ಯ ಎಂದು ಸೂಚ್ಯವಾಗಿ ಹೇಳಿದರು.
ಎರಡು ದಿನವೂ ಸಭೆಗೆ ಗೈರಾದ ಶಾಸಕ ಜಿ.ಟಿ.ದೇವೇಗೌಡರ ಮನೆಗೆ ದಳಪತಿಗಳು ಹೋಗಿ ಮನವೊಲಿಸಲು ಯಶಸ್ವಿಯಾದರು. ಹೀಗಾಗಿ, ಅವರು ಜೆಡಿಎಸ್‌ನಲ್ಲಿ ಉಳಿದುಕೊಂಡಿದ್ದಾರೆ.