ಹಾಸನ: ಹತ್ತು ತಿಂಗಳ ನಂತರ ಜೆಡಿಎಸ್ ನಗರಸಭೆ ಅಧ್ಯಕ್ಷ ಸ್ಥಾನದ ಅಧಿಕಾರ ಬಿಟ್ಟು ಕೊಡಲಿಲ್ಲ ಅಂದರೆ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಎರಡು ಅಂಕಿ ದಾಟಲು ಬಿಡಲ್ಲ. ಮುಂದೆ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ ಎಂದು ಮಾಜಿ ಶಾಸಕ ಪ್ರೀತಂಗೌಡ ಹೇಳಿದರು.
ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸದಸ್ಯರನ್ನು ಅಧ್ಯಕ್ಷ, ಉಪಾಧ್ಯಕ್ಷ ಮಾಡುವ ಶಕ್ತಿ ನನಗಿತ್ತು. ನಾನು ಜೆಡಿಎಸ್ ಸದಸ್ಯರ ಓಟು ಹಾಕಿಸಿಕೊಳ್ಳಬಹುದಾಗಿತ್ತು. ನಾನೇನು ಅಸಹಾಯಕನಲ್ಲ. ನನಗೂ ಶಕ್ತಿ ಇತ್ತು. ಇದು ಸಾರ್ವಜನಿಕರಲ್ಲಿ ಬೇಸರ ತರುವ ಸಂಗತಿ. ಜೆಡಿಎಸ್ ಮೈತ್ರಿ ಧರ್ಮ ಪಾಲಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಹಾಸನದಲ್ಲಿ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿ ನಿಲ್ಲಿಸಿದ್ದೆವು. ವೀರಶೈವ ಸಮಾಜಕ್ಕೆ ಸೇರಿದವರನ್ನು ಉಪಾಧ್ಯಕ್ಷ ಮಾಡಬೇಕೆಂದು ಪಕ್ಷ ತೀರ್ಮಾನಿಸಿತ್ತು. ಇವತ್ತು ದೊಡ್ಡ ಆಶ್ಚರ್ಯ ತರುವ ರೀತಿ ನಡೆದಿದೆ. ನಾನು ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಡಬಹುದಿತ್ತು. ಬೇರೆ ಯಾವುದಕ್ಕೂ ಆಸ್ಪದ ಕೊಡದೆ ಚೌಕಟ್ಟನ್ನು ದಾಟಿಲ್ಲ. ಎಲ್ಲವನ್ನೂ ರಾಜ್ಯದ, ಕೇಂದ್ರದ ನಾಯಕರು ಗಮನಿಸುತ್ತಿರುತ್ತಾರೆ ಎಂದು ಹೇಳಿದರು.
ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ರಾಜ್ಯಾಧ್ಯಕ್ಷರು ಚುನಾವಣೆ ಸಂಬಂಧ ಎಲ್ಲೆಡೆ ಸೂಚನೆ ಕೊಟ್ಟಿದ್ದರು. ಮಂಗಳವಾರ ರಾತ್ರಿ ಆರ್.ಅಶೋಕ್, ಅಶ್ವಥ್‌ನಾರಾಯಣ್, ಸಿಮೆಂಟ್ ಮಂಜು, ಎಚ್.ಡಿ.ರೇವಣ್ಣ ಜತೆ ಚರ್ಚೆ ಮಾಡಿದ್ದರು. ಅದರಂತೆ ಜಿಲ್ಲಾಧ್ಯಕ್ಷರಿಗೂ ಎಲ್ಲ ಸದಸ್ಯರು ಸೂಚನೆ ಕೊಟ್ಟಿದ್ದರು. ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ, ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಎಂದು ನಿರ್ಧಾರವಾಗಿತ್ತು. ಆದರೆ, ಜೆಡಿಎಸ್ ನಂಬಿಕೆ ದ್ರೋಹ ಮಾಡಿದೆ. ಈ ಬಗ್ಗೆ ಜೆಡಿಎಸ್-ಬಿಜೆಪಿ ರಾಜ್ಯ ನಾಯಕರು ಚರ್ಚೆ ಮಾಡುತ್ತಾರೆ ಎಂದು ಅಕ್ರೋಶ ಹೊರಹಾಕಿದರು.
ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ನಿಂತವರಿಗೆ ಬಿಜೆಪಿ ಎಲ್ಲ ಸದಸ್ಯರು ಮತ ನೀಡಿದ್ದಾರೆ. ಆದರೆ ಎಲ್ಲ ಬಿಜೆಪಿ ಸದಸ್ಯರಿಗೂ ಜೆಡಿಎಸ್‌ನವರು ಅಗೌರವ ತೋರಿದ್ದಾರೆ. ಹಿಂದೆ ಯಡಿಯೂರಪ್ಪ ಅವರಿಗೂ ಹೀಗೆ ಮಾಡಿದ್ದರು. ಏನು ವ್ಯತ್ಯಾಸ ಆಗಿದೆ, ಪರಿಹಾರ ಕಂಡುಕೊಳ್ಳಲು ನಮ್ಮ ಪಕ್ಷದ ಮುಖಂಡರಿಗೆ ಹೇಳಿದ್ದೇನೆ. ನಮ್ಮ ಜಿಲ್ಲಾಧ್ಯಕ್ಷರು ವರಿಷ್ಠರಿಗೆ ಈ ಬಗ್ಗೆ ವಿವರವಾಗಿ ತಿಳಿಸುತ್ತಾರೆ. ಆನಂತರದಲ್ಲಿ ಏನಾಗುತ್ತದೆ ನೋಡೋಣ ಎಂದರು.
ಶಾಸಕ ಸ್ವರೂಪ್ ವಿರುದ್ಧ ಪ್ರೀತಂ ಗೌಡ ಕೆಂಡಾಮಂಡಲ:
ಮೈತ್ರಿ ಎಂದರೆ ಪರಸ್ಪರ ಒಡಂಬಡಿಕೆ. ಮೈತ್ರಿ ಧರ್ಮವನ್ನು ಬಿಜೆಪಿ ಪಾಲಿಸಿದೆ. ಸಾಂದರ್ಭಿಕ ಶಾಸಕರಿಗೆ ಸಾಂದರ್ಭಿಕವಾಗಿ ಏನು ನಡೆಯುತ್ತದೆ ಅಂತ ಗೊತ್ತಿರಲ್ಲ. ಇದು ಶಾಸಕರು ಮಾಡುವ ತೀರ್ಮಾನ ಅಲ್ಲ. ಶಾಸಕರ ಕಿಮ್ಮತ್ತು ಎಷ್ಟು ಗೌರವವಿದೆ ಅಂತ ಅವರು ತೀರ್ಮಾನ ಮಾಡಬೇಕು. ಅದು ಶಾಸಕರ ವೀಕ್ನೆಸ್, ಅವರ ಪಕ್ಷದವರೇ ಅವರಿಗೆ ಹೇಳಿಲ್ಲ. ಅವರ ಕ್ಷೇತ್ರದ ಬಗ್ಗೆ ಗೊತ್ತಿಲ್ಲ. ಒಂದು ಗುದ್ದಲಿ ಪೂಜೆ ಮಾಡಿಲ್ಲ. ಇನ್ನೂ ಪ್ರೊಬೆಷನರಿ ಪಿರಿಯಡ್‌ನಲ್ಲಿ ಇದ್ದಾರೆ. ಇನ್ನೂ ಮೂರೂವರೆ ವರ್ಷ ಹಾಗೆಯೇ ಇರುತ್ತಾರೆ. ಅವರು ಕೆಲಸ ಮಾಡಲಿ, ಆಮೇಲೆ ಅವರನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಸ್ವರೂಪ್ ಅವರನ್ನು ಅವರ ಪಕ್ಷದವರೇ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಶಾಸಕ ಸ್ವರೂಪ್ ಪ್ರಕಾಶ್ ವಿರುದ್ಧ ಪ್ರೀತಂ ಗೌಡ ಕೆಂಡ ಕಾರಿದರು.
ಮೈತ್ರಿ ಏಕೆ ಆಗಿಲ್ಲ ಅನ್ನುವುದರ ಬಗ್ಗೆ ಅವರ ಪಕ್ಷದವರು ಹೇಳಬೇಕು. ಅವರಿಗೆ ಮತ ಹಾಕಿದ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ಕಾಯುತ್ತಿದ್ದರು. ಶಾಸಕರು ಯಾವ ಮತಗಳಿಂದ ಗೆದ್ದಿದ್ದಾರೆ ಎನ್ನುವುದು ಗೊತ್ತಿದೆ. ಆ ಋಣವನ್ನಾದರೂ ತೀರಿಸುತ್ತಾರೆ ಅಂದುಕೊಂಡಿದ್ದೆ ಅದನ್ನು ಮಾಡಲಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.