ಚನ್ನಪಟ್ಟಣ : ಜೆಡಿಎಸ್ ರಾಜ್ಯ ಅಧ್ಯಕ್ಷ ಸ್ಥಾನ ಸಂಬಂಧ ಪಕ್ಷದ ಚೌಕಟ್ಟಿನಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಜೆಡಿಎಸ್ ಯುವಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲೂಕಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಜ.12 ರಂದು ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಶಾಸಕರು, ಮಾಜಿ ಶಾಸಕರು, ಮುಖಂಡರು ಭಾಗಿಯಾಗಲಿದ್ದಾರೆ. ಈ ವೇಳೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಚುನಾವಣೆಗೆ ಸಿದ್ಧತೆ! : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಕುಮಾರಸ್ವಾಮಿಯವರೇ ಮುಂದುವರಿಯುತ್ತಾರೆ. ಮುಂದೆ ನೋಡೋಣ, ಕಾರ್ಯಕರ್ತರು ಬಯಸಿದಂತೆ ಆಗುತ್ತೆ. ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಜಿಪಂ ಹಾಗೂ ತಾಪಂ ಚುನಾವಣೆ ಬರಬಹುದು. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ನಿಖಿಲ್ ತಿಳಿಸಿದರು.
ಸರ್ಕಾರದ ವಿರುದ್ಧ ವಾಗ್ದಾಳಿ : ರಾಜ್ಯ ಸರ್ಕಾರ ಬಸ್ ಪ್ರಯಾಣ ದರ, ಹಾಲಿನ ದರ ಏರಿಕೆ ಮಾಡಿದೆ. ಸರ್ಕಾರ ಗ್ಯಾರಂಟಿ ಹೆಸರಲ್ಲಿ ಗಿಮಿಕ್ ಮಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ತಿಂಗಳ ಹಣ ಹಾಕಿದ್ದರು. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೂರು ತಿಂಗಳ ಹಣ ಹಾಕಿದರು. ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ 6 ತಿಂಗಳದ್ದು ಹಾಕುತ್ತಾರೆ. ಇದು ಯಾರ ದುಡ್ಡು ಎಂದು ಪ್ರಶ್ನಿಸಿದ ನಿಖಿಲ್, ರಾಜ್ಯದ ಸಂಪತ್ತನ್ನು ಸ್ವತಃ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಕಾಲಬಂದಾಗ ಜನ ಉತ್ತರ ಕೊಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಸ್ಥಳೀಯ ಗ್ರಾಮಗಳಲ್ಲಿನ ಕುಂದು ಕೊರತೆಗಳ ಮಾಹಿತಿ ಪಡೆದರು. ಇದೇ ವೇಳೆ ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ಎಲ್ಲರೂ ಪಕ್ಷದ ಜತೆ ನಿಂತು ಹೋರಾಟ ಮಾಡೋಣ. ನಾನು ಸೋತಿದ್ದೇನೆ ಎಂದು ಮನೆಯಲ್ಲಿ ಕೂರುವುದಿಲ್ಲ, ನಿಮ್ಮ ಜತೆ ಇರುತ್ತೇನೆ ಎಂದು ಧೈರ್ಯ ತುಂಬಿದರು.