ಚನ್ನರಾಯಪಟ್ಟಣ: ಸಹಕಾರ ಕ್ಷೇತ್ರದಲ್ಲಿ ಮಾಡಿದ ಸಾಧನೆ ಮತ್ತು ಪಾರದರ್ಶಕದ ಆಡಳಿತ ನೀಡಿದ ಫಲವಾಗಿ ತಗಡೂರು ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲಾ 11 ಸ್ಥಾನಗಳು ಜೆಡಿಎಸ್ ಪಾಲಾಗಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ನೂತನ ನಿರ್ದೇಶಕರನ್ನು ಮಂಗಳವಾರ ಅಭಿನಂದಿಸಿ ಮಾತನಾಡಿದ ಅವರು, ತಗಡೂರು ಪಂಚಾಯಿತಿ ಭಾಗದ ರೈತಾಪಿ ವರ್ಗ ಸೊಸೈಟಿ ಇಲ್ಲದೆ ಸಾಲ ಪಡೆಯುವಿಕೆಯಿಂದ ವಂಚಿತರಾಗಿದ್ದರು. ಇದನ್ನು ಮನಗಂಡು ಮೂರು ವರ್ಷಗಳ ಹಿಂದೆ ಸೊಸೈಟಿ ತೆರೆದು ಎರಡು ಅವಧಿಯಲ್ಲಿ 5.81ಕೋಟಿ ಸಾಲ ನೀಡಲಾಗಿದೆ. ಒಂದು ಸಾವಿರ ರೈತರು ಇದರ ಪ್ರಯೋಜನ ಪಡೆದಿದ್ದಾರೆ. 43ಸಂಘಗಳಿಗೆ 1.46 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಅವರು ವಿವರಿಸಿದರು. ಸಾಲಗಾರರ ಕ್ಷೇತ್ರದಿಂದ ಆಯ್ಕೆಯಾದ ತಗಡೂರು ಬಸವರಾಜ್, ಸಾಲಗಾರರೇತರ ಕ್ಷೇತ್ರದಿಂದ ಆಯ್ಕೆಯಾದ ಗಿರೀಶ್ ಸೇರಿ ನಿರ್ದೇಶಕರಾದ ಈರೇಗೌಡ, ಎಚ್.ಎನ್.ಉಮೇಶ್, ಬಿ.ಸಿ.ಚಂದ್ರಶೇಖರ್, ಎಸ್.ಜಿ.ಜಯರಾಮ, ತಿಲಾಮಣಿ, ಕೆ.ಎಂ.ನಾಗೇಶ, ಕೆ.ಸಿ.ಪ್ರದೀಪ್, ಎನ್.ಬಸವರಾಜ್, ಮಂಜುಳಾ ಸೇರಿ ಮುಖಂಡರಾದ ಕುಂಬಾರಹಳ್ಳಿ ರಮೇಶ್, ವಿ.ಎನ್.ಮಂಜುನಾಥ್ ಇತರರು ಇದ್ದರು.