ಚನ್ನರಾಯಪಟ್ಟಣ; ತಾಲೂಕಿನ ಎರಡು ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶವು ಸೋಮವಾರ ಪ್ರಕಟಗೊಂಡಿದ್ದು ಎರಡರಲ್ಲಿಯೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ನಲ್ಲೂರು ಗ್ರಾಮ ಪಂಚಾಯಿತಿಯ ಚೋಳೇನಹಳ್ಳಿ ಹಾಗೂ ಬ್ಯಾಡರಹಳ್ಳಿ ಗ್ರಾಪಂ ವ್ಯಾಪ್ತಿಯ ಮಡಬ ಕ್ಷೇತ್ರಗಳಲ್ಲಿ ಅ.28 ರಂದು ಉಪ ಚುನಾವಣೆ ಜರುಗಿದ್ದು ಅ.31 ರಂದು ಸೋಮವಾರ ಎಣಿಕೆಯೊಂದಿಗೆ ಫಲಿತಾಂಶ ಹೊರಬಿದ್ದಿದೆ.
ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎ.ಚೋಳೇನಹಳ್ಳಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ-299 ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಎನ್.ಕುಮಾರ್-641 ಮತಗಳನ್ನು ಪಡೆದಿದ್ದಾರೆ. 9 ಮತಗಳು ತಿರಸ್ಕೃತಗೊಂಡಿವೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಎನ್.ಕುಮಾರ್ 342 ಮತಗಳಿಂದ ವಿಜಯಶೀಲರಾಗಿದ್ದಾರೆ.
ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬ ಕ್ಷೇತ್ರದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೋಮಲ-440 ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಧಾ 321 ಮತಗಳನ್ನು ಗಳಿಸಿದ್ದಾರೆ. 14 ಮತಗಳು ತಿರಸ್ಕೃತಗೊಂಡಿವೆ. ಈ ಕ್ಷೇತ್ರದಲ್ಲಿಯೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೋಮಲ 119 ಮತಗಳ ಅಂತರದಿಂದ ಜಯದ ಪತಾಕೆ ಹಾರಿಸಿದ್ದಾರೆ.
ಜೆಡಿಎಸ್ ಸಂಭ್ರಮಾಚರಣೆ: ನಡೆದ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತರು ಜಯಗಳಿಸಿದ ಹಿನ್ನೆಲೆ ತಾಲೂಕಿನ ಜೆಡಿಎಸ್ ನಾಯಕರು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಕುಸುಮಾರಾಣಿ, ನೂತನ ಸದಸ್ಯರಾದ ಸಿ.ಎನ್.ಕುಮಾರ್, ಕೋಮಲಾ ಹಾಗೂ ಪ್ರಮುಖರು ಇದ್ದರು.