ಜಿಲ್ಲೆ

ಜೆಡಿಎಸ್, ಬಿಜೆಪಿ ನಾಯಕರದ್ದು ರಾಜಕೀಯ ಪ್ರೇರಿತ ಹೇಳಿಕೆ: ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಆರೋಪ

ಮೈಸೂರು: ಗೃಹ ಸಚಿವರ ಅಥವಾ ಸರ್ಕಾರದ ವೈಫಲ್ಯವನ್ನು ಟೀಕಿಸುವ ಭರದಲ್ಲಿ ವೈಯಕ್ತಿಕ ದಾಳಿಗೆ ಮುಂದಾಗಿರುವುದು ರಾಜಕೀಯ ಪಕ್ಷಗಳ ಹತಾಶ ಮನೋಭಾವನೆ ಗೋಚರಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಕಿಡಿಕಾರಿದರು.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಜೆಡಿಎಸ್, ಬಿಜೆಪಿ ನಾಯಕರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದೆ. ಇಂತಹ ಘಟನೆಗಳು ನಡೆದಿರುವುದು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ.

ನಮ್ಮ ವ್ಯವಸ್ಥೆಯ ಬಗ್ಗೆ ನಮಗೆ ನಾವೇ ಅವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಮೆರವಣಿಗೆಗೆ ಅವಕಾಶ ನೀಡದಿದ್ದಾಗ ವಿರೋಧ ಪಕ್ಷದವರು ಯಾವ ರೀತಿ ಜನರನ್ನು ಪ್ರಚೋದಿಸಿ ಗೃಹ ಸಚಿವರ ಆತ್ಮವಿಶ್ವಾಸ ಕುಗ್ಗಿಸಲು ಪ್ರಯತ್ನಿಸಿದರು ಎಂಬುದು ಜನತೆಗೆ ಗೊತ್ತಿದೆ.

ಈ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ದೃಷ್ಟಿಕೋನದಿಂದ ನೋಡಬೇಕಿಲ್ಲ. ಇಂತಹ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಅವರು ಸಿಎಂ, ಡಿಸಿಎಂ ಬಗ್ಗೆ ಆಡಿರುವ ಮಾತುಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.

ಸಾರ್ವಜನಿಕ ಜೀವನದಲ್ಲಿ ಯಾವಾಗಲೂ ಟೀಕೆ ಮಾಡುವುದರಲ್ಲಿ ಜನತೆಯನ್ನು ಪ್ರಚೋದಿಸುವಂತೆ ನಡೆದುಕೊಳ್ಳುವುದು ಸರಿಯಲ್ಲ. ಪ್ರತಿಪಕ್ಷಗಳ ಹೇಳಿಕೆ ನೋಡಿದರೆ ದುಃಖದಲ್ಲಿಯೂ ಅವರ ವರ್ತನೆಗಳು ನಾಗರಿಕ ಸಮಾಜದ ಲಕ್ಷಣವಲ್ಲ ಎಂದು ಹರಿಹಾಯ್ದಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸಾಮರ್ಥ್ಯದ ಬಗ್ಗೆ ಸುರೇಶ್ ಬಾಬು ಅವರ ಪ್ರಶಂಸೆ ಬೇಕಿಲ್ಲ. ಇಂತಹ ಅಸಮರ್ಥ ಹೇಳಿಕೆಗಳು ಸುರೇಶ್ ಬಾಬು ಅವರ ವ್ಯಕ್ತಿತ್ವಕ್ಕೆ ಸರಿಹೊಂದುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ರಾಜಕುಮಾರ್ ನಿಧನರಾದರು.

ಆಗ ಕುಮಾರಸ್ವಾಮಿ ಅವರು ಜನಜಂಗುಳಿಯನ್ನು ಯಾವ ರೀತಿ ನಿಭಾಯಿಸಿದರು ಎಂಬುದು ಎಲ್ಲರಿಗೂ ತಿಳಿದಿದೆ. ಅಂದು 7 ಜನರು ಅಸುನೀಗಿದ್ದರು. ಅದಕ್ಕೆ ಕುಮಾರಸ್ವಾಮಿಯನ್ನು ನೀವು ಹೊಣೆ ಮಾಡಲು ಸಾಧ್ಯವೇ? ಇಂತಹ ಅನಿರೀಕ್ಷಿತ, ಯಾರೂ ನಿರೀಕ್ಷಿಸಿದ ಘಟನೆಯಿಂದ ಸರ್ಕಾರವೇ ತೀವ್ರ ನೋವಿನಲ್ಲಿದೆ ಎಂದು ಹೇಳಿದ್ದಾರೆ.