ಜಿಲ್ಲೆ

ಜೆಡಿಎಸ್ ಪಾಳಯದಲ್ಲಿ ಕೈ ಘರ್ಜನೆ; ಕಾಂಗ್ರೆಸ್ ಮುಖಂಡರ ಒಗ್ಗಟ್ಟು ಪ್ರದರ್ಶನ

Hassan - Ramesh H R

ಹಾಸನ: ಮೂರು ಕ್ಷೇತ್ರಗಳ ಕಾಂಗ್ರೆಸ್ ಭರ್ಜರಿ ಜಯಭೇರಿ, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಪ್ರತಿಪಕ್ಷಗಳ ನಾಯಕರಿಗೆ ತಿರುಗೇಟು, ಪಕ್ಷದ ಮುಖಂಡರ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನಕ್ಕೆ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗುರುವಾರ ಸ್ವಾಭಿಮಾನಿ ಒಕ್ಕೂಟಗಳ ಸಹಯೋಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜನೆಗೊಂಡಿದ್ದ ಜನ ಕಲ್ಯಾಣ ಸಮಾವೇಶಕ್ಕೆ ಅಕ್ಷರಶಃ ವಿರೋಧ ಪಕ್ಷಗಳು ಬೆಚ್ಚಿಬಿದ್ದಿವೆ.

ಈ ಮೊದಲು ಸ್ವಾಭಿಮಾನಿ ಸಮಾವೇಶವಾಗಿ ಆಯೋಜನೆಗೊಂಡರೂ ಬದಲಾದ ಸನ್ನಿವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಜನ ಕಲ್ಯಾಣ ಸಮಾವೇಶವಾಗಿ ನಡೆದರೂ ಅಕ್ಷರಶಃ ಇದು ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವೇ ಆಗಿತ್ತು. ಸಮಾವೇಶದಲ್ಲಿ ನೆರದಿದ್ದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಸಿದ್ದರಾಮಯ್ಯ ಹೆಸರು ಕೇಳಿದಾಗಲೆಲ್ಲಾ ಜೋರಾಗಿ ಕಿರುಚಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದರು. ಅದರಲ್ಲೂ ಅವರು ಭಾಷಣಕ್ಕೆ ನಿಂತಾಗಲಂತೂ ಸ್ವತಃ ಸಿದ್ದರಾಮಯ್ಯ ಅವರೇ ಜನರನ್ನು ಗದರಿಸಿ ಸುಮ್ಮನಿರಿಸಬೇಕಾಯಿತು.

ಸಮಾವೇಶ ಕಾಂಗ್ರೆಸ್ ಒಳಬೇಗುದಿಗೆ ಕಾರಣವಾಗಲಿದೆ ಎಂಬ ನಿಜವಾಗಲಿಲ್ಲ. ಎಲ್ಲ ನಾಯಕರ ಸಮಾಗಮ, ಪಕ್ಷದ ಪರವಾಗಿ ಮತ್ತು ಸಿಎಂ ಸಿದ್ದರಾಮಯ್ಯ ಪರವಾಗಿ ಆಡಿದ ಮಾತುಗಳು ಪಕ್ಷದಲ್ಲಿನ ಒಗ್ಗಟ್ಟು ಪ್ರದರ್ಶಿಸುವಂತಿತ್ತು. ಜತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಈ ಬಂಡೆ ಹಿಂದೆಯೇ ಇತ್ತು, ಇವತ್ತು ಇದೆ, ಮುಂದೆಯೇ ಇರಲಿದೆ ಎಂದು ಹೇಳಿದ್ದು ಅಭಿಮಾನಿಗಳಿಗೆ ಇನ್ನು ಹೆಚ್ಚಿನ ಸಂತೋಷ ತಂದಿತು.

ಸಮಾವೇಶ ಕುರಿತು ಸಿದ್ದರಾಮಯ್ಯ ಅವರು ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಾಸನ ಇಂತಹ ಬೃಹತ್ ಸಮಾವೇಶ ನೋಡಿದ್ದು ಇದೇ ಮೊದಲು ಎಂಬ ಹೇಳಿಕೆಯೇ ನೆರದಿದ್ದ ಜನಸಂಖ್ಯೆಗೆ ಸಾಕ್ಷಿಯಾಗಿತ್ತು. ಅಭಿಮಾನಿಗಳೇ ದೇವರು ಎಂಬ ಡಾ.ರಾಜ್ ಕುಮಾರ್ ಹೇಳಿಕೆ ನೆನಪಿಸಿಕೊಂಡ ಸಿದ್ದರಾಮಯ್ಯ ಅವರು ನಮಗೆ ಮತದಾರರೇ ದೇವರು ಎಂದು ಜನರನ್ನು ದೇವರಿಗೆ ಹೋಲಿಕೆ ಮಾಡಿದ್ದು, ಮತದಾರರಿಗೆ ಎರಡು ಕೈ ಮೇಲೆತ್ತಿ ನಿಮ್ಮ ಆಶೀರ್ವಾದ ಕೇಳಿದ್ದು, ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿತ್ತು.

ಕಾರ್ಯಕ್ರಮ 12 ಗಂಟೆಗೆ ಸಿದ್ದರಾಮಯ್ಯ ಅವರು ಬರುವುದು ಒಂದೂವರೆ ಗಂಟೆ ತಡವಾಯಿತು. ಈ ವೇಳೆ ವೇದಿಕೆ ಮೇಲೆ ಆಸೀನರಾಗಿದ್ದ ಸಚಿವರು ಚಿಕ್ಕದಾಗಿ ಭಾಷಣ ಮಾಡಿ ಹೋಗುತ್ತಿದ್ದರು. ಹೀಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಷಣ ಮಾಡುವಾಗ ಕಾಂಗ್ರೆಸ್ ಹತ್ತಾರು ಮುಖಂಡರು ಸಚಿವೆ ಪಕ್ಕದಲ್ಲಿ ನಿಂತು ಜೋರಾಗಿ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಭಾಷಣ ನಿಲ್ಲಿಸಿದ ಸಚಿವೆ ನಾನು ಭಾಷಣ ನಿಲ್ಲಿಸುತ್ತೇನೆ, ನೀವೇ ಮಾತನಾಡಿಕೊಳ್ಳಿ ಎಂದಾಗ ಅಲ್ಲಿದ್ದವರೆಲ್ಲಾ ಪಕ್ಕಕ್ಕೆ ಸರಿದರು.

ಸಿದ್ದರಾಮಯ್ಯ ಅವರ ಭಾಷಣದಲ್ಲಿ ಇರುವ ಸ್ವಾೃಗ್ ಇಲ್ಲೂ ಮುಂದುವರಿದಿದ್ದು. ಅವರ ಭಾಷಣಕ್ಕೆ ಬಂದಾಗ ಸುಮಾರು ಐದಾರು ನಿಮಿಷ ಜನರು ಕಿರುಚುತ್ತಲೇ ಇದ್ದರು. ಆಗ ಸಿದ್ದರಾಮಯ್ಯ ಅವರು ‘ಏಯ್ ಸುಮ್ನೀರಿ, ಏಯ್ ಯಾವನೋ ಅವನು, ಆಯ್ತು ಕೂತ್ಕೊಳಿ, ಕಳ್ಸೊ ಆಚೆಗೆ ಅವ್ನ,’ ಎಂಬ ಮಾತುಗಳು ಮಧ್ಯೆ ಮಧ್ಯೆ ತೂರಿಬರುತ್ತಿದ್ದವು.

ಸಮಾವೇಶ ಆಯೋಜನೆಯ ಬಹುತೇಕ ಜವಾಬ್ದಾರಿಯನ್ನು ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಆರಂಭದಿಂದ ಹಿಡಿದು ಕೊನೆಯವರೆಗೂ ವೇದಿಕೆ ಮೇಲೆ ಲವಲವಿಕೆಯಿಂದ ಓಡಾಡಿಕೊಂಡು ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಕಾಂಗ್ರೆಸ್‌ನ ಇತರೆ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಾಗ ‘ಇಲ್ಲಿ ಏನು ಶೋ ಕೊಡಲು ಬಂದಿದ್ದೀರಾ? ಕೆಲಸ ಮಾಡಿದವರಿಗಿಂತ ಶೋ ತೆಗೆದುಕೊಳ್ಳಲು ಬರುವವರೆ ಹೆಚ್ಚಿದ್ದಾರೆ. ಇಳೀರಿ ಇಲ್ಲ, ಸೈಡಲ್ಲಿ ನಿಂತ್ಕೊಳಿ. ವೇದಿಕೆ ಮಧ್ಯೆ ಪದೇಪದೆ ಓಡಾಡಬೇಡಿ,’ ಎಂದು ಗದರಿಸಿದರು.

ಇನ್ನು ಈ ಸಮಯದಲ್ಲಿ ಸಮಾವೇಶದ ಅವಶ್ಯಕತೆ ಇತ್ತೆ ಎಂಬ ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿದ ಡಿ.ಕೆ. ಶಿವಕುಮಾರ್ ಅವರು, ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ಭಾವನೆ, ಧರ್ಮಗಳ ಮೇಲೆ ರಾಜಕೀಯ ಮಾಡುವುದಿಲ್ಲ. ನಮ್ಮ ಅಧಿಕಾರ ನಶ್ವರ. ಆದರೆ ಕಾಂಗ್ರೆಸ್ ಪಕ್ಷದ ಸಾಧನೆ ಅಜರಾಮರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ. ಇದು ಜನರ ಕಲ್ಯಾಣ ಹಾಗೂ ಗ್ಯಾರಂಟಿ ಗೆಲುವಿನ ಸಮಾವೇಶ ಎಂದು ಸ್ಪಷ್ಟನೆ ನೀಡಿದರು.

ಇಂತಹ ಬೃಹತ್ ಸಮಾವೇಶವನ್ನು ಹಾಸನದಲ್ಲಿಯೇ ಏಕೆ ಪ್ರಶ್ನೆಗೂ ಸಹ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಅನಂತರ ಮಂಡ್ಯ ಅಥವಾ ಹಾಸನದಲ್ಲಿ ಮಾಡುವ ನಿರ್ಧಾರ ಬಂದಾಗ ಅಂತಿಮವಾಗಿ ಎಲ್ಲರ ಇಚ್ಛೆಯಂತೆ ಹಾಸನದಲ್ಲಿ ಈ ಸಮಾವೇಶ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಇನ್ನು ಈ ಸಮಾವೇಶ ಆಯೋಜನೆ ಹಿಂದೆ ಪಕ್ಷ ಸಂಘಟನೆ ಸಹಜವೆ. ಮಂಡ್ಯದಲ್ಲಿ ಏಳು ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ. ಆದರೆ, ಹಾಸನ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರವೇ ಕಾಂಗ್ರೆಸ್ ಗೆದ್ದಿದೆ. ಮುಂದಿನ ವಿಧಾನಸಭಾ ಚುನಾವಣೆ ವೇಳೆ ಎಂಟು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ಈ ಸಮಾವೇಶವನ್ನು ಹಾಸನದಲ್ಲಿ ಆಯೋಜನೆ ಮಾಡಲಾಗಿದೆ ಎಂಬುದು ಮುಖಂಡರ ಮಾತಿನಿಂದಲೇ ತಿಳಿದು ಬಂತು.

ಇನ್ನು ಈ ಸಮಾವೇಶದಲ್ಲಿ ಆರೇಳು ಸಚಿವರನ್ನು ಹೊರತುಪಡಿಸಿ ಉಳಿದ ಸಚಿವ ಸಂಪುಟದ ಎಲ್ಲ ಸದಸ್ಯರು, ಶಾಸಕರು ಹಾಜರಾಗಿದ್ದರು.