ಜಿಲ್ಲೆ

ಜೆಡಿಎಸ್ ಪಕ್ಷದಿಂದಲೂ ಸಮಾವೇಶ ಆಯೋಜನೆ: ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ

Hassan - Ramesh H R

ಹಾಸನ: ನಮ್ಮ ನಾಯಕರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗಾಗಿ ನಾವೂ ಸಮಾವೇಶ ಮಾಡುತ್ತೇವೆ. ನೀವು 6 ಜಿಲ್ಲೆಯಿಂದ ಅಷ್ಟು ಜನರ ಕರೆಸಿದ್ದಿರಿ. ನಾವು ಒಂದೇ ಜಿಲ್ಲೆಯಿಂದ ಅಷ್ಟೂ ಜನರನ್ನು ಸೇರಿಸುತ್ತೇವೆ. ನಮ್ಮ ನಾಯಕರನ್ನು ಖಂಡಿಸಿರುವುದಕ್ಕೆ ತಿರುಗೇಟು ನೀಡುತ್ತೇವೆ ಎಂದು ಜೆಡಿಎಸ್ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಸವಾಲು ಹಾಕಿದರು.

ಸಮಾವೇಶದಲ್ಲಿ ಕಾಂಗ್ರೆಸ್ ಸಚಿವರು ಸರ್ಕಾರದ ಸಾಧನೆ ಹೇಳುವ ಬದಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತವರ ಕುಟುಂಬವನ್ನು ನಿಂದನೆಗಾಗಿ ಸಮಾವೇಶ ಮಾಡಿದ್ದು ಅರ್ಥಹೀನ ಮತ್ತು ಸ್ವಾರ್ಥದ ಸಮಾವೇಶ. ಅದಕ್ಕೆ ಬೆಲೆ ಇಲ್ಲ. ಜನ ಕಲ್ಯಾಣ ಹೆಸರಿನ ಸಮಾವೇಶದಲ್ಲಿ ಕಳೆದ 20 ತಿಂಗಳಲ್ಲಿ ರಾಜ್ಯ, ಜಿಲ್ಲೆಗೆ ನೀಡಿರುವ ಕೊಡುಗೆ ಏನೆಂದು ಹೇಳಲೇ ಇಲ್ಲ? ಈ ಸರ್ಕಾರ ಸಾಧನೆ ಮಾಡಿದ್ದರೆ ಶ್ವೇತ ಪತ್ರ ಹೊರಡಿಸಲಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ನಿಜಕ್ಕೂ ಅವಮಾನಕರ. ಈ ಅನ್ಯಾಯಕ್ಕೆ ಏನು ಹೇಳುತ್ತಾರೆ. ಇದು ಇವರ ಆಡಳಿತ ವೈಖರಿಯೇ? ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಪರಿಸ್ಥಿತಿ ಏನಾಗಿದೆ, ಅಂಬೇಡ್ಕರ್ ಶಾಲೆ ಏನಾಗಿವೆ, ಆಡಳಿತ ಒಂದು ರೀತಿ ಸತ್ತು ಹೋಗಿದೆ. ಆದರೂ ಜೆಡಿಎಸ್ ನಾಯಕರನ್ನು ಟೀಕೆ ಮಾಡಿದ್ದು ಖಂಡನೀಯ ಎಂದರು.

ಉಪ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಯ ದಿಕ್ಸೂಚಿ ಅಲ್ಲ. ಇದರಿಂದ ಬೆನ್ನು ತಟ್ಟಿಕೊಳ್ಳುವುದು ಬೇಡ. ವಾಲ್ಮೀಕಿ ಸೇರಿ ವಿವಿಧ ನಿಗಮಗಳಲ್ಲಿ ಭ್ರಷ್ಟಾಚಾರದಿಂದ ಅಧಿಕಾರಿಗಳು, ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು? ಈ ಹುಳುಕನ್ನು ಸಮಾವೇಶದಲ್ಲಿ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಈ ಸರ್ಕಾರ ಯಾವುದೇ ಅನುದಾನ ನೀಡದೆ ಶಾಸಕರು ಹಳ್ಳಿಗಳಿಗೆ ಹೋಗದಂತೆ ಮಾಡಿದೆ. ಕೊಳವೆ ಬಾವಿ ಸೇರಿ ಯಾವುದಕ್ಕೂ ಹಣ ನೀಡುತ್ತಿಲ್ಲ. ಜನ ಕಲ್ಯಾಣ ಹೆಸರಿನಲ್ಲಿ ಸಿಎಂ-ಡಿಸಿಎಂ ಅವರ ಕುರ್ಚಿ ಭದ್ರ ಮಾಡಿಕೊಳ್ಳಲು ಸಮಾವೇಶ ಮಾಡಿದ್ದಾರೆ. ನಮ್ಮ ನಾಯಕರ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ರಾಜ್ಯ, ದೇಶದಲ್ಲಿ ತಮ್ಮದೇ ಕೊಡುಗೆಯಾದ ನೀಡಿರುವ ದೇವೇಗೌಡರು ಕಪ್ಪು ಚುಕ್ಕೆ ಇಲ್ಲದ ಮಹಾನಾಯಕ. ಯಾವ ನಾಯಕರನ್ನೂ ಅವರು ತುಳಿದಿಲ್ಲ. ಆದರೂ ಕಾಂಗ್ರೆಸ್‌ನವರು ಹೀಗೆ ಟೀಕೆ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಕುಮಾರಸ್ವಾಮಿ ಅವರು 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರೂ ಅಭಿವೃದ್ಧಿ ಕಡೆಗಣಿಸಲಿಲ್ಲ. ರೇವಣ್ಣ ಅವರ ಸಾಕ್ಷಿಗುಡ್ಡೆ ಏನೆಂಬುದು ಹಳ್ಳಿ ಹಳ್ಳಿಗಳಲ್ಲೂ ಇದೆ. ಹಾಸನ-ಬೆಂಗಳೂರು 4 ಪಥದ ಹೆದ್ದಾರಿ, ಅನೇಕ ಕಾಲೇಜು, ಬಸ್ ನಿಲ್ದಾಣ, ಜಿಲ್ಲಾ ಕೋರ್ಟ್ ಮಾಡಿದ್ದು ಯಾರು? ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷದಲ್ಲಿ ಒಂದೇ ಒಂದು ಕಟ್ಟಡ ಮಂಜೂರು ಮಾಡಿಲ್ಲ. ಬೇಕಿದ್ದ ಈ ಕುರಿತು ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.

ಹಾಸನದಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ. ಮುಂದೆ ಒಳ್ಳೆಯ ಭವಿಷ್ಯ ಇದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳಕ್ಕೆ ಏಳೂ ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ತಿರುಕನ ಕನಸು ಎಂದು ಟಾಂಗ್ ನೀಡಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ಸಿಎಂ ಹಗರಣ ಮುಚ್ಚಿ ಹಾಕಲು ಈ ಸಮಾವೇಶ ಮಾಡಲಾಗಿದೆ. ಇದೊಂದು ರೀತಿ ಕೊಲೆ ಮಾಡಿದವನನ್ನು ಖುಲಾಸೆ ಮಾಡಿದಂತೆ. ಜನ ಸೇರಿದಾಕ್ಷಣ ಅವರೆಲ್ಲ ಸರ್ಕಾರದ ಪರ ಇದ್ದಾರೆ ಅಂತ ಅಲ್ಲ. ಮುಂದೆ ಎಲ್ಲವೂ ತಿಳಿಯಲಿದೆ. ರಾಜ್ಯದ ಬೊಕ್ಕಸ ಬರಿದಾಗಿದೆ. ಸಾವಿರಾರು ಕೋಟಿ ರೂ. ಸಾಲ ಮಾಡಿದ್ದಾರೆ. ಇಳಿವಯಸ್ಸಿನಲ್ಲೂ ದೇವೇಗೌಡರು ಜಿಲ್ಲೆ, ರಾಜ್ಯದ ಬಗ್ಗೆ ಹೋರಾಡುತ್ತಿದ್ದಾರೆ. ಶಿವಲಿಂಗೇಗೌಡರಿಗೆ ಜೆಡಿಎಸ್ ಏನೂ ಮಾಡಿಲ್ಲ ಎಂಬುದನ್ನು ಎದೆ ಮುಟ್ಟಿ ಹೇಳಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಇದ್ದರು.