ಮಳವಳ್ಳಿ ಪಟ್ಟನದ ಶಾಂತಿ ಸಮುದಾಯ ಭವನದಲ್ಲಿ ನಡೆದ ಪಂಚರತ್ನ ಯಾತ್ರೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ ಶಾಸಕ ಡಾ.ಕೆ.ಅನ್ನದಾನಿ ಕೈ ಹಿಡಿದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುತ್ತೇವೆಂದು ಆಣೆ, ಪ್ರಮಾಣ ಮಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇದ್ದರು. 
ಜಿಲ್ಲೆ

ಜೆಡಿಎಸ್ ಗೆಲ್ಲಿಸಲು ಜೋಡೆತ್ತುಗಳ ಶಪಥ

ಮಳವಳ್ಳಿ: ನನ್ ಮನೆ ದೇವ್ರ ಚೌಡಮ್ಮನಾಣೆ, ನಂಜುಂಡೇಶ್ವರನಾಣೆ ನಾನು ಮತ್ತು ರವಿ ಜೋಡೆತ್ತುಗಳಂತೆ ದುಡಿದು ಮಳವಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುತ್ತೇವೆ. ನಾನು ಜೆಡಿಎಸ್ ಪಕ್ಷದ ಜೀತದಾಳು, ಯಾವುದೇ ಗೊಂದಲಪಡುವ ಅಗತ್ಯವಿಲ್ಲ. ವಿಶ್ವಣ್ಣ-ನಾನು ಸೇರಿಕೊಂಡು, ಎಲ್ಲರ ಸಹಕಾರ ಪಡೆದು ಭಗವಂತನ ಸಾಕ್ಷಿಯಾಗಿ ಅನ್ನದಾನಿ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಲು ಶ್ರಮಿಸುತ್ತೇವೆ.

ಜೆಡಿಎಸ್ ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್ ಹಾಗೂ ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ ಒಬ್ಬರಿಗೊಬ್ಬರು ಶಾಸಕ ಡಾ.ಕೆ.ಅನ್ನದಾನಿ ಅವರ ಕೈ ಹಿಡಿದು ಮಾಡಿದ ಆಣೆ-ಪ್ರಮಾಣದ ಮಾತುಗಳಿವು.

ಡಿ. 20ರಂದು ತಾಲೂಕಿಗೆ ಆಗಮಿಸುವ ಜೆಡಿಎಸ್ ಪಂಚರತ್ನ ಯಾತ್ರೆ ಸಂಬಂಧ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆಯನ್ನು ಪಟ್ಟಣದಲ್ಲಿ ಶನಿವಾರ ಶಾಸಕ ಡಾ.ಕೆ.ಅನ್ನದಾನಿ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.

ಈ ವೇಳೆ ಜಿಲ್ಲಾಧ್ಯಕ್ಷ ಡಿ.ರಮೇಶ್ ಅವರು ವೇದಿಕೆಯಲ್ಲಿದ್ದ ತಾಲೂಕು ಅಧ್ಯಕ್ಷ ವಿಶ್ವನಾಥ್ ಮತ್ತು ಜಿಲ್ಲಾ ಯುವ ಘಟಕ ಅಧ್ಯಕ್ಷ ರವಿ ಅವರನ್ನು ಉದ್ದೇಶಿಸಿ, ನಿಮ್ಮಿಬ್ಬರಲ್ಲೂ ಸಾಮರಸ್ಯ ಇಲ್ಲವೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ವೇದಿಯಿಂದಲೇ ನೀವಿಬ್ಬರೂ ಕೈ ಕೈ ಹಿಡಿದು ಒಗ್ಗಟ್ಟಿನ ಮಾತನಾಡಿದರೆ ಈ ಕ್ಷೇತ್ರವನ್ನು ನಾವು ಗೆದ್ದಿದ್ದೇವೆಂದು ನೆಮ್ಮದಿಯಿಂದ ಹೋಗುತ್ತೇನೆಂದರು.

ಈ ವೇಳೆ ಇಬ್ಬರೂ ನಾಯಕರು ಶಾಸಕರ ಕೈಹಿಡಿದು ಆಣೆ-ಪ್ರಮಾಣ ಮಾಡಿ ಭರವಸೆಯ ಮಾತನಾಡಿದರು. ನೆರೆದವರು ಅಭಿಮಾನದಿಂದ ಘೋಷಣೆ ಕೂಗಿದರು.

ಡಾ.ಕೆ. ಅನ್ನದಾನಿ ಮಾತನಾಡಿ, ಶಾಸಕನಾಗಿ ಕ್ಷೇತ್ರದಲ್ಲಿ ಎಲ್ಲ ವರ್ಗದವರ ಪ್ರೀತಿ, ವಿಶ್ವಾಸ ಗಳಿಸುವಂತಹ ಕೆಲಸ ಮಾಡಿದ್ದೇನೆ. ಸಣಪುಟ್ಟ ವ್ಯತ್ಯಾಸಗಳಿಂದ ಕೆಲವು ಕಾರ್ಯಕರ್ತರು ಹಾಗೂ ಮುಖಂಡರಿಗೆ ಯಾವುದೋ ಸಂದರ್ಭದಲ್ಲಿ ನೋವಾಗಿರಬಹುದು. ಅದಕ್ಕಾಗಿ ಈ ವೇದಿಕೆ ಮುಖಾಂತರ ಕ್ಷಮೆಯಾಚಿಸುತ್ತೇನೆ ಎಂದರು.

ತಾಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಪಕ್ಷ ಸಂಘಟನೆ ಮಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಮನವಿ ಮಾಡಿದರು.

ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಪ್ರಶಾಂತ್, ಪುರಸಭೆ ಸದಸ್ಯರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.