ಬಸವಕಲ್ಯಾಣ: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶಪ್ಪ ಬಿರಾದಾರ ತೆನೆ ಹೊತ್ತ ಮಹಿಳೆಗೆ ಗುಡ್ ಬೈ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಕ್ಷ ನಡೆಸಿಕೊಳ್ಳುವ ರೀತಿ ಹಾಗೂ ಒಳ್ಳೆಯವರಿಗೆ ಬೆಲೆ ಇಲ್ಲದ ಕಾರಣ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲತಃ ತಾಲೂಕಿನ ತಡೋಳಾದ ಕೇಶಪ್ಪ ಅವರು ಜನತಾ ಪರಿವಾರದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕದಿಂದ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ತಾಲೂಕು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, 2008ರಿಂದ ಈವರೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪಕ್ಷದಲ್ಲಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಉಪ ಚುನಾವಣೆಯ ಹೊಸ್ತಿಲಲ್ಲಿ ಇವರ ರಾಜೀನಾಮೆ ಸಾಕಷ್ಟು ಮಹತ್ವ ಪಡೆದಿದೆ.
ರಾಜೇಶ್ವರ ಮಂಡಲ್ ನ ಪ್ರಧಾನರಾಗಿದ್ದ ವೇಳೆ ಅತ್ಯುತ್ತಮ ಕೆಲಸ ಮಾಡಿದ್ದಕ್ಕಾಗಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಹಲವು ನಾಯಕರು ಪಕ್ಷಾಂತರ ಮಾಡಿದ ಸಮಯದಲ್ಲಿ ಸಹ ಕೇಶಪ್ಪ ಜೆಡಿಎಸ್ ಬಿಡಲಿಲ್ಲ. ಆದರೆ ಇದೀಗ ದಿಢೀರ್ ಪಕ್ಷಕ್ಕೆ ಗುಡ್ ಬೈ ಹೇಳಲು ನಿರ್ಧರಿಸಿದ್ದು ಪಕ್ಷಕ್ಕೆ ಡ್ಯಾಮೇಜ್ ಎಂದೇ ಹೇಳಲಾಗುತ್ತಿದೆ.