ನಾಗಮಂಗಲ ಪುರಸಭೆಯ 3ನೇ ವಾರ್ಡ್ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನೂತನ ಸದಸ್ಯೆ ಸೌಮ್ಯಾ ತಿರುಮಲಯ್ಯ ಮತ್ತು ಜೆಡಿಎಸ್ ಮುಖಂಡರನ್ನು ಶಾಸಕ ಸುರೇಶ್‌ಗೌಡ ಅಭಿನಂದಿಸಿದರು. 
ಜಿಲ್ಲೆ

ಜೆಡಿಎಸ್ ಅಭ್ಯರ್ಥಿ ಸೌಮ್ಯಾ ತಿರುಮಲಯ್ಯ ಜಯಭೇರಿ

ನಾಗಮಂಗಲ: ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ಪುರಸಭೆಯ 3ನೇ ವಾರ್ಡ್ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೌಮ್ಯಾ ತಿರುಮಲಯ್ಯ ಜಯ ಗಳಿಸಿದ್ದಾರೆ.

ಸೋಮವಾರ ನಡೆದ ಮತ ಎಣಿಕೆಯಲ್ಲಿ ಸೌಮ್ಯಾ ತಿರುಮಲಯ್ಯ ಅವರು 234 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಲಕ್ಷ್ಮೀ ರಂಗಪ್ಪ (209 ಮತ) ಅವರನ್ನು 34 ಮತಗಳ ಅಂತರದಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ ಶಶಿಕಲಾ ಚಂದ್ರಾಚಾರ್ ಕೇವಲ 5 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

3ನೇ ವಾರ್ಡ್‌ನ ಈ ಹಿಂದಿನ ಕಾಂಗ್ರೆಸ್ ಸದಸ್ಯೆ ಇಂದಿರಾ ಕುಮಾರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅ.28ರಂದು ಉಪ ಚುನಾವಣೆ ನಡೆದಿತ್ತು. ಒಟ್ಟು 514 ಮತಗಳ ಪೈಕಿ 459 ಮತಗಳು ಚಲಾವಣೆಗೊಂಡಿದ್ದವು.

ಸಂಖ್ಯಾಬಲ ಹೆಚ್ಚಿಸಿಕೊಂಡ ಜೆಡಿಎಸ್: ಈ ಹಿಂದಿನ ಸದಸ್ಯೆ ಇಂದಿರಾ ಕುಮಾರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಹೀಗಾಗಿ ಈ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದೆಂದು ಕೈ ಪಕ್ಷದ ಮುಖಂಡರು ಉಪಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ನಿಂತ ಜೆಡಿಎಸ್ ಮುಖಂಡರು, ಈ ಸ್ಥಾನವನ್ನು ಜೆಡಿಎಸ್ ಬುಟ್ಟಿಗೆ ಹಾಕಿ ಕೊಳ್ಳುವ ಮೂಲಕ ಸಂಖ್ಯಾ ಬಲವನ್ನು 13 ಸ್ಥಾನಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ.

ವಿಜಯೋತ್ಸವ : ಜೆಡಿಎಸ್ ಅಭ್ಯರ್ಥಿ ಸೌಮ್ಯಾ ತಿರುಮಲಯ್ಯ ಅವರು ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಸುರೇಶ್‌ಗೌಡ ಪರ ಜಯಘೋಷ ಮೊಳಗಿಸಿ ಸಂಭ್ರಮಿಸಿದರು. ಪಟ್ಟಣದ ತಾಲೂಕು ಆಡಳಿತಸೌಧದಿಂದ ಬಿಜಿಎಸ್ ವೃತ್ತದ ಮೂಲಕ ಮೂಲಕ 3ನೇವಾರ್ಡ್‌ವರೆಗೂ ಬೃಹತ್ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು.

ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಶಂಕರಲಿಂಗೇಗೌಡ, ಪುರಸಭೆ ಉಪಾಧ್ಯಕ್ಷ ಜಾಫರ್ ಷರೀಪ್, ಪುರಸಭೆ ಸದಸ್ಯರಾದ ಚನ್ನಪ್ಪ, ವಿಜಯಕುಮಾರ್, ದಿವಾಕರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವೇಗೌಡ, ತಾಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರಶಾಂತ್, ತಾಲೂಕು ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಮಂಜೇಗೌಡ, ಮುಖಂಡರಾದ ಮಂಜೇಶ್, ತಿರುಮಲಯ್ಯ ಹಾಗೂ ಕಂಚಿನಕೋಟೆ ಮೂರ್ತಿ ಇತರರಿದ್ದರು.

 ಈ ಹಿಂದೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗಿನಿಂದಲೂ ಅಂದರೆ, ಕಳೆದ 25 ವರ್ಷಗಳಿಂದಲೂ ಪಟ್ಟಣದ 3ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿತ್ತು. ಆದರೆ ಈ ಬಾರಿ ಉಪ ಚುನಾವಣೆಯಲ್ಲಿ ವಾರ್ಡ್‌ನ ಅಲ್ಪಸಂಖ್ಯಾತರೂ ಸೇರಿದಂತೆ ಎಲ್ಲ ಮತದಾರರು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಈ ಗೆಲುವಿಗೆ ಶ್ರಮಿಸಿದ ಜೆಡಿಎಸ್‌ನ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಸುರೇಶ್‌ಗೌಡ ಶಾಸಕ