ಹನೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಸಾವಿರಾರು ಬೆಂಬಲಿಗರೊಂದಿಗೆ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. 
ಜಿಲ್ಲೆ

ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ನಾಮಪತ್ರ ಸಲ್ಲಿಕೆ

ಹನೂರು: ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಗುರುವಾರ ತೆನೆಹೊತ್ತ ಮಹಿಳೆಯರು ಹಾಗೂ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ರೋಡ್ ಶೋ ನಡೆಸುವ ಮೂಲಕ ನಾಮಪತ್ರ ಸಲ್ಲಿಸಿದರು.

ಬೆಳಗ್ಗೆ ಪಟ್ಟಣದ ಪೆಟ್ರೋಲ್ ಬಂಕ್ ವೃತ್ತದ ಮೂಲಕ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಶ್ರೀಬೆಟ್ಟಳ್ಳಿ ಮಾರಮ್ಮ ದೇಗುಲಕ್ಕೆ ಆಗಮಿಸಿದ ಅವರು, ಪತ್ನಿ ನಂದಿನಿ ಅವರ ಜತೆಗೂಡಿ ಪೂಜೆ ಸಲ್ಲಿಸಿದರು. ಬಳಿಕ ವಾದ್ಯಮೇಳ ಹಾಗೂ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ಬಂಡಳ್ಳಿ ರಸ್ತೆ, ಬಸ್ ನಿಲ್ದಾಣ, ಮಹದೇಶ್ವರಬೆಟ್ಟದ ಮುಖ್ಯರಸ್ತೆಯಲ್ಲಿ ಸಾಗಿದ ಮಂಜುನಾಥ್, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು. ಬಳಿಕ ಚುನಾವಣಾ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಮಧುಸೂದನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ಜೆಡಿಎಸ್ ಬಾವುಟ ರಾರಾಜಿಸಿದವು. ಅಭ್ಯರ್ಥಿ ಮಂಜುನಾಥ್ ಪರ ಜೈಕಾರ ಮೊಳಗಿದವು. ಕಾರ್ಯಕರ್ತರು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತಮಟೆ, ಡೋಲು ಹಾಗೂ ನಗಾರಿ ತಾಳಕ್ಕೆ ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರು.